ಮೈಸೂರು : ಸಿಎಂ ಕುಟುಂಬದ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ ಕೇಳಿ ಬಂದಿದೆ. ಕೆಸರೆ, ಆಲನಹಳ್ಳಿ ಆಯ್ತು ಈಗ ದಟ್ಟಗಳ್ಳಿ ಬಡಾವಣೆಯಲ್ಲಿ ಅಕ್ರಮ ನಿವೇಶನ ಪಡೆದು ಬೇರೆಯವರಿಗೆ ಮಾರಾಟ ಮಾಡಿದ್ದಾರೆಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತಾಕ್ಕೆ ಮತ್ತೊಂದು ದೂರು ನೀಡಿದ್ದಾರೆ.
ಮನವಿ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ 50:50 ಹಗರಣ ವಿಚಾರವಾಗಿ ಲೋಕಾಯುಕ್ತದಲ್ಲಿ ನಾನು ಪ್ರಕರಣ ದಾಖಲಿಸಿದ್ದೆ. ಎಲ್ಲ 50:50 ಅನುಪಾತದ ಸೈಟುಗಳ ಬಗ್ಗೆ ತನಿಖೆ ಮಾಡುವಂತೆ ಮನವಿ ಪತ್ರ ಕೊಟ್ಟಿದ್ದೆ. ಆದರೆ ಲೋಕಾಯುಕ್ತ ಕೇವಲ ಸಿದ್ದರಾಮಯ್ಯ ಕುಟಂಬದ 14 ಸೈಟುಗಳ ಬಗ್ಗೆ ಮಾತ್ರ ತನಿಖೆ ಮಾಡಿದ್ದಾರೆ. ಇತರ ಆರೋಪಿಗಳು ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.
ದಟ್ಟಗಳ್ಳಿ ಗ್ರಾಮದಲ್ಲಿ ಸಿಎಂ ಪತ್ನಿ ಪಾರ್ವತಿ 24 ಲಕ್ಷಕ್ಕೆ ಒಂದು ಸೈಟ್ ನಂಬರ್ 5338, 50*80 ವಿಸ್ತೀರ್ಣದ ಸೈಟ್ ಖರೀದಿ ಮಾಡಿ 1 ಕೋಟಿಗೆ ಮಾರಾಟ ಮಾಡಿದ್ದಾರೆ. ಸತ್ಯನಾರಾಯಣ ಎಂಬವರಿಂದ ಖರೀದಿ ಮಾಡಿದ್ದಾರೆ. 2008 ಖರೀದಿ ಮಾಡಿ, 2014 ನಲ್ಲಿ ನೋಂದಣಿ ಅಧಿಕಾರಿಗಳನ್ನು ತಾನಿದ್ದ ಕಡೆ ಕರೆಸಿಕೊಂಡು ಮಾರಾಟ ಮಾಡಿದ್ದಾರೆ. 6 ವರ್ಷಗಳಲ್ಲಿ 75 ಲಕ್ಷ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ರೀತಿ ಮುಡಾ ಮಾಜಿ ಆಯುಕ್ತ ನಟೇಶ್ ಅವರು ಸೈಯದ್ ಅಲಿ ಅವ್ರಿಗೆ ಕಾನೂನು ಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಿನ್ನಲೆ ಸೈಯದ್ ಅಲಿ ನಟೇಶ್ ಹೆಂಡತಿಯ ಸೋದರ ಮಾವ ರಾಜಶೇಖರ್, ಅವರ ಹೆಂಡ್ತಿ ತಾರ ಅವರಿಗೆ ಒಂದು ಸೈಟ್ ಮಂಜೂರು ಮಾಡಿದ್ದಾರೆ. ಈ ಎಲ್ಲವನ್ನೂ ತನಿಖೆ ಮಾಡಿ ಎಂದು ಲೋಕಾಯುಕ್ತಕ್ಕೆ ಮತ್ತಷ್ಟು ದಾಖಲೆಯೊಂದಿಗೆ ಸ್ನೇಹಮಯಿ ಕೃಷ್ಣ ಅವರು ಮನವಿ ಕೊಟ್ಟಿದ್ದಾರೆ.