ಬೆಳಗಾವಿ: ಪರಿಶಿಷ್ಟ ಪಂಗಡಗಳ (ಎಸ್.ಟಿ) ಸಮುದಾಯಕ್ಕೆ ಅನ್ಯ ಸಮುದಾಯಗಳ ಉಪ ಜಾತಿಗಳನ್ನು ಸೇರ್ಪಡೆಗೊಳಿಸುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ತೀರ್ಮಾನದ ಖಂಡಿಸಿ ನಗರದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ (ರಿ) ವತಿಯಿಂದ ಬುಧವಾರ (ಸೆ.17) ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುರುಬ ಸಮುದಾಯ ಹಾಗೂ ಸೇರಿದಂತೆ ಇತರೆ ವರ್ಗದ ಉಪ ಜಾತಿಗಳನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರ್ಪಡೆಗೆ ವಿರೋಧಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ (ರಿ) ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ ಅವರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಯವರಿಗೆ ಜಿಲ್ಲಾಡಳಿತದ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ ನಾಯಕ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಇತಿಹಾಸವಿದೆ. ಎಸ್.ಟಿ ವರ್ಗಕ್ಕೆ ಕುರುಬ ಹಾಗೂ ತಳವಾರ, ಪರಿವಾರ ಸೇರಿದಂತೆ 39 ಉಪ ಜಾತಿಗಳ ಸೇರ್ಪಡೆ ಸರ್ಕಾರ ತೆಗೆದುಕೊಂಡ ನಿರ್ಧಾರ ಸಂವಿಧಾನದ ಆಶಯಕ್ಕೆ ಪೆಟ್ಟು ಬಿದ್ದಂತಾಗಲಿದೆ ಎಂದರು.
ಎಸ್.ಟಿ ಮೀಸಲಾತಿ ಕ್ಷೇತ್ರಗಳಿಂದ ಆಯ್ಕೆಯಾದ ಸಚಿವರು, ಶಾಸಕರು ಸಮುದಾಯದ ಹಕ್ಕುಗಳ ಉಳಿವಿಗೆ ಕೈ ಜೋಡಿಸಬೇಕು. ಸಮುದಾಯದ ಹಿತಾಸಕ್ತಿ ಕಾಯಲು ಮೀಸಲಾತಿ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಜನರು ನಿಮ್ಮ ಆಯ್ಕೆ ಮಾಡಿದ್ದಾರೆ. ಎಲ್ಲ ಶಾಸಕರು, ಸಚಿವರು ಉಪ ಜಾತಿ ಸೇರ್ಪಡೆ ಪ್ರಯತ್ನ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿ ಹೇಳುವ ಕೆಲಸಕ್ಕೆ ಮುಂದಾಗಬೇಕು.
ಈಗಾಗಲೇ ಇರುವಂತಹ ಮೀಸಲಾತಿಯಲ್ಲಿ ಎಸ್.ಟಿ ವರ್ಗಕ್ಕೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಅಂತಹದರಲ್ಲಿ ಇತರ ಸಮುದಾಯಗಳ ಉಪ ಜಾತಿಗಳು ಸೇರ್ಪಡೆಯಾದಲ್ಲಿ ಎಸ್.ಟಿ ಸಮುದಾಯಕ್ಕೆ ಅನ್ಯಾಯವಾಗಲಿದೆ ಇದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮುದಾಯದ ಎಲ್ಲ ಶಾಸಕರು, ಸಚಿವರು ಮನವರಿಕೆ ಮಾಡಬೇಕು ಎಂದು ಹೇಳಿದರು.
ಶಿಕ್ಷಣ, ಉದ್ಯೋಗದಲ್ಲಿ ಮುಂಬಡ್ತಿ ಸೇರಿಯಂತೆ ಹಲವಾರು ರೀತಿಯಲ್ಲಿ ಹಿನ್ನಡೆಯಾಗಲಿದೆ. ಅದರ ಜೊತೆಗೆ ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರದಿಂದ ಸಾಕಷ್ಟು ಎಸ್.ಟಿ ಫಲಾನುಭವಿಗಳು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಒಂದುವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್.ಟಿ ವರ್ಗದಲ್ಲಿ ಅನ್ಯ ಸಮುದಾಯಗಳ ಸೇರ್ಪಡೆಗೊಳಿಸುವ ಕೆಲಸ ಮುಂದುವರೆಸಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಮಹೇಶ್ ಶೀಗಿಹಳ್ಳಿ ಹೇಳಿದರು.
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಹೆಗ್ಗನಾಯಕ,
ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ ಮುಳಗಳಿ,
ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ರಾಮ್ ಪೂಜಾರಿ, ಬೆಳಗಾವಿ ತಾಲೂಕಾ ಅಧ್ಯಕ್ಷ ಮಂಗೇಶ ಚಿನ್ನಿಕೊಪ್ಪ, ಉಪಾಧ್ಯಕ್ಷ ಮುತ್ತುರಾಜ ಹೊಸಗಟ್ಟಿ ಸೇರಿದಂತೆ ಸಂಘಟನಾ ಸದಸ್ಯರು, ಸಮುದಾಯದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
***