ಬೆಳಗಾವಿ: ಕೇಂದ್ರ ಸರಕಾರದ ನೀತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಏ.28 ರಂದು ಸಂವಿಧಾನ ಬಚಾವೋ ಕಾಂಗ್ರೆಸ್ ಸಮಾವೇಶವನ್ನು ನಗರದ ಸಿಪಿಎಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆಶಿವಕುಮಾರ್, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕೊಹೊಳಿ, ರಾಜ್ಯ ಸಂಪುಟ ಸಚಿವರು, ಶಾಸಕರು ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರು ಬೆಳಗಾವಿಗೆ ಆಗಮಿಸಲಿದ್ದಾರೆ.
ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ದೇಶದ ಜನರಿಗೆ ಮನವರಿಕೆ ಮಾಡಲು ಈ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದು, ಸುಮಾರು 25 ಸಾವಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಏಪ್ರಿಲ್ 25ರಿಂದ ಏಪ್ರಿಲ್ 30 ರವರೆಗೆ ಪಿಸಿಸಿ ಮಟ್ಟದಲ್ಲಿ ‘ಸಂವಿಧಾನ್ ಬಚಾವೋ’ ರ್ಯಾಲಿಗಳನ್ನು ಆಯೋಜಿಸಲಾಗಿದ್ದು, ಮೇ 3 ರಿಂದ ಮೇ 10 ರವರೆಗೆ ಜಿಲ್ಲಾ ಮಟ್ಟದಲ್ಲಿ ಇದೇ ರೀತಿಯ ರ್ಯಾಲಿಗಳು ನಡೆಯಲಿವೆ. ಮೇ 11 ರಿಂದ ಮೇ 17 ರವರೆಗೆ, ದೇಶಾದ್ಯಂತ 4,500 ವಿಧಾನಸಭಾ ಕ್ಷೇತ್ರಗಳಲ್ಲಿ ಸಂವಿಧಾನ್ ಬಚಾವೋ ರ್ಯಾಲಿಗಳು ನಡೆಯಲಿವೆ. ಮೇ 20ರಿಂದ ಮೇ 30ರವರೆಗೆ ಸಂವಿಧಾನವನ್ನು ಉಳಿಸಲು ಮನೆ ಮನೆಗೆ ತೆರಳಿ ಅಭಿಯಾನ ನಡೆಯಲಿದೆ.
ಇನ್ನು ನಾಳೆ ಸಿಪಿಎಡ್ ಮೈದಾನದಲ್ಲಿ ನಡೆಯುವ ಸಂವಿಧಾನ ಬಚಾವೋ ಕಾಂಗ್ರೆಸ್ ಸಮಾವೇಶಕ್ಕಾಗಿ ಬೃಹತ್ ಟೆಂಟ್ ನಿರ್ಮಿಸಲಾಗಿದೆ. ಈ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರು ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಸೇಮಿಸಲಾಗಿದೆ.