Tuesday, April 29, 2025
Google search engine
Homeರಾಜ್ಯಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬದ್ಧವಾಗಿದೆ ; ಸಚಿವ ಪರಮೇಶ್ವರ್‌
spot_img

ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬದ್ಧವಾಗಿದೆ ; ಸಚಿವ ಪರಮೇಶ್ವರ್‌

ಬೆಂಗಳೂರು: ರಾಜ್ಯದಲ್ಲಿ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಶನಿವಾರ ಹೇಳಿದರು.

ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ “CIDECODE” ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.

ವಿಧಾನಸಭಾ ಅಧಿವೇಶನದ ಎರಡು ವಾರಗಳಲ್ಲಿ ಸುಮಾರು 6ಕ್ಕಿಂತಲೂ ಹೆಚ್ಚಿನ ಪ್ರಶ್ನೆಗಳು ಸೈಬರ್‌ ಅಪರಾಧ ಕುರಿತಂತೆ ಕೇಳಿಬಂದಿವೆ. ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಬದ್ಧವಾಗಿದ್ದು, ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈಬರ್ ಅಪರಾಧಗಳ ಕುರಿತು ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 46 ಸಾವಿರ ಜನರಿಗೆ ಸೈಬರ್‌ ಅಪರಾಧಗಳ ಬಗ್ಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಪೊಲೀಸರಷ್ಟೇ ಅಲ್ಲ ನ್ಯಾಯಾಂಗ ಮತ್ತು ಅಭಿಯೋಜನೆ ಇಲಾಖೆಯವರಿಗೂ ಕೂಡ ತರಬೇತಿ ನೀಡುವುದಾಗಿ ತಿಳಿಸಿದರು.

2023 ರಲ್ಲಿ, ಸುಮಾರು 22,000 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಬ್ಯಾಂಕ್ ಖಾತೆ ವಂಚನೆ, ಡೇಟಾ ಹ್ಯಾಕಿಂಗ್ ಮತ್ತು ಸರ್ಕಾರಿ ಖಾತೆಗಳ ಹ್ಯಾಕಿಂಗ್ ಸೇರಿದಂತೆ ವಿವಿಧ ರೀತಿಯ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸಾಂಪ್ರದಾಯಿಕ ಅಪರಾಧಗಳಿಗಿಂತ ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ.

ಬೆಂಗಳೂರಿನಲ್ಲಿ ದಾಖಲಾದ ಸಾಮಾನ್ಯ ಅಪರಾಧಗಳಲ್ಲಿ ಶೇಕಡಾ 30 ರಷ್ಟು ಸೈಬರ್ ಅಪರಾಧಗಳು ಕಂಡು ಬಂದಿವೆ. ವೈಟ್‌ಫೀಲ್ಡ್ ವಿಭಾಗದಲ್ಲಿ, ಸೈಬರ್ ಅಪರಾಧ ಪ್ರಕರಣಗಳು ಒಟ್ಟು ವರದಿಯಾದ ಅಪರಾಧಗಳಲ್ಲಿ ಶೇಕಡಾ 40 ರಷ್ಟಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ, ಆರಂಭಿಕ ಹಂತದಲ್ಲಿ ತಡೆಗಟ್ಟುವಿಕೆಯತ್ತ ಗಮನಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

“ತಂತ್ರಜ್ಞಾನ ಮತ್ತು ತರಬೇತಿ ಕಾನೂನು-ಸುವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೈಬರ್ ಅಪರಾಧಗಳಲ್ಲಿ ಜಾಗತಿಕವಾಗಿ ಏರಿಕೆಯಾಗುತ್ತಿರುವುದರಿಂದ, ಅವುಗಳನ್ನು ಎದುರಿಸಲು ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಸಿಐಡಿ ಡಿಕೋಡ್ ಶೃಂಗಸಭೆ ಪ್ರಯೋಜನಕಾರಿಯಾಗಲಿದೆ. ಹ್ಯಾಕಥಾನ್‌ಗಳು ಮತ್ತು ಸೈಬರ್ ಕಾನೂನು ಐಡಿಯಾಥಾನ್‌ಗಳಂತಹ ಕಾರ್ಯಕ್ರಮಗಳು ಸುರಕ್ಷಿತ ಡಿಜಿಟಲ್ ಕರ್ನಾಟಕ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು.

ಸಿಐಡಿ ಆಯೋಜಿಸಿದ ಹ್ಯಾಕಥಾನ್ ಮತ್ತು ಸೈಬರ್ ಕಾನೂನು ಐಡಿಯಾಥಾನ್‌ನಲ್ಲಿ ಸಚಿವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.

RELATED ARTICLES
- Advertisment -spot_img

Most Popular

error: Content is protected !!