Tuesday, April 29, 2025
Google search engine
Homeಜಿಲ್ಲಾಸರ್ಕಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ; ಇದು ಅಸಂವಿಧಾನಾತ್ಮಕ ತೀರ್ಮಾನ  ವಿಜಯೇಂದ್ರ ಖಂಡನೆ...!
spot_img

ಸರ್ಕಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ; ಇದು ಅಸಂವಿಧಾನಾತ್ಮಕ ತೀರ್ಮಾನ  ವಿಜಯೇಂದ್ರ ಖಂಡನೆ…!

ಬೆಳಗಾವಿ: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಮೂಲಕ ಜಾತಿ ಜಾತಿ ನಡುವೆ ಜಗಳ ಹಚ್ಚುವ, ಒಡಕು ಮೂಡಿಸುವ ದುಸ್ಸಾಹಸ ಮತ್ತು ಷಡ್ಯಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಮುಸ್ಲಿಂರ ಓಲೈಕೆ ದುರ್ದೈವದ ಸಂಗತಿ. ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಸದನದ ಹೊರಗೆ ಮತ್ತು ಒಳಗೆ ಎರಡೂ ಕಡೆ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ವಿಜಯೇಂದ್ರ ಎಚ್ಚರಿಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ಸರ್ಕಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿಡುವುದಾಗಿ ಘೋಷಿಸಿದ್ದರು. ಅದೇ ರೀತಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ‌ ಮೀಸಲಾತಿ ಕೊಡುವ ಬಗ್ಗೆ ಉಲ್ಲೇಖವಾಗಿಲ್ಲ. ಹಾಗಾಗಿ, ಇದು ಅಸಂವಿಧಾನಾತ್ಮಕ ತೀರ್ಮಾನವನ್ನು ನಾವು ಖಂಡಿಸುತ್ತೇವೆ, ಪ್ರಜಾಪ್ರಭುತ್ವ ವಿರೋಧಿ‌ ನಿಲುವನ್ನು ವಿರೋಧಿಸುತ್ತೇವೆ ಎಂದರು.

ಸದನದೊಳಗೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ. ಹಣಕಾಸಿನ ಮುಗ್ಗಟ್ಟಿದೆ ಅಂತಾ ಬಿಜೆಪಿ ಘೋಷಿಸಿದ್ದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಈ ಸರ್ಕಾರ ಬಂದಿತ್ತು. ಯಾವಾಗ ಸದನದಲ್ಲಿ ಈ ವಿಷಯ ನಾವು ಚರ್ಚಿಸಿದೇವೋ, ಮುಂದೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂಬುದನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಅವರು ವಿವಿ ಮುಚ್ಚುವ ನಿರ್ಧಾರ ಕೈಗೊಂಡಿಲ್ಲ ಎಂದು ಮೊನ್ನೆ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆ ನಿರ್ಧಾರದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಇದು ನಮ್ಮ ಹೋರಾಟದ ಪರಿಣಾಮ ಎಂದು ವಿಜಯೇಂದ್ರ ಸಮರ್ಥಿಸಿಕೊಂಡರು.

ಫೈನಾನ್ಸ್ ಹಾವಳಿ ಕುರಿತು ಸದನದಲ್ಲಿ ಚರ್ಚೆ ಆಗಿದೆ. ಈ ಕುರಿತು ಒಂದು ಬಿಲ್ ಕೂಡ ಪಾಸ್ ಆಗಿದೆ. ಬಿಗಿಯಾದ ಕಾನೂನು ಅನುಷ್ಠಾನಕ್ಕೆ ತರುತ್ತೇವೆ. ಫೈನಾನ್ಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಸಾಕಷ್ಟು ಸಾವು ನೋವು ಆಗಿದೆ. ಹಾಗಾಗಿ, ಸರ್ಕಾರ ಎಚ್ಚೆತ್ತುಕೊಂಡು ಬಡವರಿಗೆ ಅನ್ಯಾಯ ಆಗುತ್ತಿರುವುದನ್ನು ಸರಿಪಡಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.

ಉತ್ತರ ಕರ್ನಾಟಕಕ್ಕೆ ಅನುಕೂಲ ಆಗಬೇಕು ಅಂತಾ ನೀರಾವರಿ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ 19 ಸಾವಿರ ಕೋಟಿ ಅನುದಾನ ನೀಡಿತ್ತು. “ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ” ಪಾದಯಾತ್ರೆ ಕೈಗೊಂಡು ಐವತ್ತು ಸಾವಿರ ಕೋಟಿ ನೀರಾವರಿ ಯೋಜನೆಗೆ ನೀಡುವುದಾಗಿ ಹೇಳಿದ್ದರು. ಅದನ್ನ ಕೂಡ ಸಿದ್ದರಾಮಯ್ಯನವರು ಮರೆತಿದ್ದಾರೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ.
ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತೂ ಕಾಳಜಿ ತೋರಿಸಿಲ್ಲ. ಎಲ್ಲೂ ಕೂಡ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರ ಅಲ್ಪಸಂಖ್ಯಾತ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ ಎಂದು ವಿಜಯೇಂದ್ರ ಹರಿಹಾಯ್ದರು.

ಸರ್ಕಾರದಲ್ಲಿ ಹಣ ಇಲ್ಲದ್ದಕ್ಕೆ ಸಾಕ್ಷಿ ಏನು ಬೇಕು..?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಮೇಲೆ 800 ಕೋಟಿ ಹೈನುಗಾರಿಕೆ ಕೊಡದೇ ತಡೆ ಹಿಡಿದಿದ್ದಾರೆ. ಅಭಿವೃದ್ಧಿ ಕೆಲಸ ಶೂನ್ಯವಾಗಿದೆ, ರೈತರಿಗೆ ಸ್ಪಂದಿಸುತ್ತಿಲ್ಲ.
ಬಿಸಿಲಿನ ತಾಪ ಹೆಚ್ಚಿದ್ದು ಮೇವು, ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಸರ್ಕಾರ ಇದರ ಬಗ್ಗೆ ಯಾವ ತಯಾರಿಯನ್ನೂ ನಡೆಸುತ್ತಿಲ್ಲ ಎಂದು ವಿಜಯೇಂದ್ರ ಕಿಡಿಕಾರಿದರು.

ನಿನ್ನೆ ದಿನ ನಡೆದ ಚುನಾವಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ ಪವಾರ, ಉಪಮೇಯರ್ ಆಗಿ ವಾಣಿ ಜೋಶಿ ಆಯ್ಕೆಯಾಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇವೆ. ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಅತೀ ಹೆಚ್ಚು ಕೆಲಸ ಕಾರ್ಯಗಳು ಆಗಲಿ. ಅದರ ಜೊತೆಗೆ ಎಲ್ಲ ಸಮಾಜ, ವರ್ಗ ಹಾಗೂ ಭಾಷಿಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿ ಎಂದು ವಿಜಯೇಂದ್ರ ಕಿವಿಮಾತು ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!