ಬೆಂಗಳೂರು: ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ತನಿಖಾಧಿಕಾರಿ ಎಸ್‌ಪಿ ಉದೇಶ್ ಅವರು, ಇಂದು ಬೆಳಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
50 ಜನರ ಹೇಳಿಕೆಗಳನ್ನು ದಾಖಲು ಮಾಡಿದ ಪೊಲೀಸರು, 27 ಸಂಪುಟ, 11,200 ಪುಟಗಳ ತನಿಖಾ ವರದಿಯನ್ನು ಬಿ ರಿಪೋರ್ಟ್ ಎಂದೇ ಉಲ್ಲೇಖಿಸಿದ್ದಾರೆ. 82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11, 200 ಸಾವಿರ ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪೊಲೀಸರು 50ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಸದ್ಯ ಅಂತಿಮ ವರದಿ ಸಲ್ಲಿಕೆಯಾದರೂ ಪ್ರಕರಣದ ತನಿಖೆ ಮುಂದುವರೆಯಲಿದೆ. ಕ್ಲೀನ್ ಚಿಟ್ ನೀಡಿದ ನಾಲ್ವರನ್ನು ಹೊರತುಪಡಿಸಿ ಉಳಿದವರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.
ದೂರುದಾರ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನಲ್ಲಿ ಯಾವುದೇ ಸಾಕ್ಷ್ಯವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಸಾಕ್ಷ್ಯಾಧಾರಗಳ ಕೊರೆತೆ ಎಂದು ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಇದರಿಂದ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ.
ಮೊದಲಿನಿಂದಲೂ ಈ ಪ್ರಕರಣದ ಸರಿಯಾಗಿ ತನಿಖೆ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದೆ, ಈಗ ಸಾಕ್ಷ್ಯಾಧಾರಗಳ ಕೊರತೆ ಎಂದು ಬಿ ರಿಪೋರ್ಟ್ ಹಾಕಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ದಾಖಲೆಗಳಿದ್ದರೂ ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳುತ್ತಿರುವುದು ಸರಿಯಲ್ಲ. 10ನೇ ತರಗತಿ ಪಾಸಾದ ನನಗೆ ಕಾನೂನಿನ ಅರಿವಿರುವಷ್ಟು ಲೋಕಾಯುಕ್ತ ಅಧಿಕಾರಿಗಳಿಗೆ ಇಲ್ಲವೇ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬವನ್ನು ರಕ್ಷಿಸಲು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಗಿಯುವ ಮುನ್ನವೇ ವರದಿ ಸಲ್ಲಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.