ಹುಬ್ಬಳ್ಳಿ: ಆಸ್ತಿ ವಿಚಾರವಾಗಿ ಹೆತ್ತ ತಂದೆ-ತಾಯಿಯನ್ನೆ ಮಗ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ತಡರಾತ್ರಿ ನಡೆದಿದ್ದು, ಕೊಲೆಯ ಸುದ್ದಿ ಕೇಳಿ ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.
ಅಶೋಕ ಕೊಬ್ಬನ್ನವರ, ಶಾರವ್ವ ಕೊಬ್ಬನ್ನವರ ಹತ್ಯೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಹತ್ಯೆಯಾದ ಅಶೋಕ ಮಗ ಗಂಗಾಧರ ಕೊಬ್ಬನ್ನವರ ಎಂಬಾತನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಹತ್ಯೆಯಾದ ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಗಂಗಾಧರ ಬಂಧನಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.