ಬೆಳಗಾವಿ : ಜನರನ್ನು ಒಗ್ಗೂಡಿಸಿ ನಮ್ಮ ನಾಯಕರು ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟರು. ಇಂತಹ ಮಹಾನ್ ನಾಯಕರನ್ನು ಸ್ಮರಿಸುವ ಉದ್ದೇಶದಿಂದ ಡಿ. 27 ರಂದು ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೆಳಿದರು.
ಬುಧವಾರ ನಗರದ ಸಿಪಿಎಡ್ ಮೈದಾನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ದೇಶಕಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಂದಿನ ನಮ್ಮ ನಾಯಕರು ಶ್ರಮಿಸಿದರು. ಮಹಾತ್ಮ ಗಾಂಧಿಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮವನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ವೀರಸೌಧದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ ಎಂದರು.
1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಇಂದು ಆ ಸ್ಥಾನದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ನಮ್ಮ ಹೆಮ್ಮೆಯ ವಿಚಾರ. ಕರ್ನಾಟಕದವರೇ ಆದ ಗಂಗಾಧರ ದೇಶಪಾಂಡೆ ಹಾಗೂ ಜವಾಹರ್ ಲಾಲ್ ನೆಹರು ಅವರು ಅಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರೂ ಸೇರಿ ಬೆಳಗಾವಿಯಲ್ಲಿ ಈ ಅಧಿವೇಶನ ಮಾಡಿದ್ದರು. ಅಂದು 80 ಎಕರೆ ಜಾಗದಲ್ಲಿ ಅಧಿವೇಶನ ನಡೆದಿತ್ತು. ಇಂದು ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಂದು ನಮ್ಮ ನಾಯಕರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಈ ದೇಶಕ್ಕೆ ಮಾರ್ಗದರ್ಶನ ನೀಡಿದ್ದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಇದನ್ನು ಸ್ಮರಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲರ ಕಾರ್ಯಕ್ರಮ. ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು. ದೇಶಕ್ಕೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಡಿ. 27 ರಂದು ನಡೆಯುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು, ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ಸಂಸತ್ ಸದಸ್ಯರು, ಶಾಸಕರು, ರಾಜ್ಯದುದ್ದಗಲದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ವಿವರಗಳು :
1924ರ ಅಧಿವೇಶನದ ದಾಖಲೆ ಸಂಗ್ರಹಗಳ ಪುಸ್ತಕ ಗುರುವಾರ ಬಿಡುಗಡೆಯಾಗಲಿದೆ. ಡಿ. 26 ರಂದು ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿಜಿ ಪುತ್ಥಳಿ ಅನಾವರಣ ಹಾಗೂ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳಗ್ಗೆ 10.45 ಕ್ಕೆ ಖಾದಿ ಮೇಳವನ್ನು ಉದ್ಘಾಟನೆ. 11.15 ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಅನಾವರಣ. ನಂತರ ಗಂಗಾಧರ ದೇಶಪಾಂಡೆ ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಡಿ.27 ರ ಶುಕ್ರವಾರ ಬೆಳಗ್ಗೆ 10.30 ಕ್ಕೆ ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅನಾವರಣಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಭಾಧ್ಯಕ್ಷ ಯು.ಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಸಮಾವೇಶ ನಡೆಯಲಿದೆ.
ದೀಪಗಳಿಂದ ಕಂಗೊಳಿಸುತ್ತಿರುವ ಕುಂದಾನಗರಿ
ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದಾದ್ಯಂತ ದೀಪಾಲಂಕಾರ ಮಾಡಿದ್ದು ಕುಂದಾನಗರಿ ಕಂಗೊಳಿಸುತ್ತಿದೆ. ಐತಿಹಾಸಿಕ ಇತಿಹಾಸ ಸಾರುವ ವಿಜಯನಗರ ಸಾಮ್ರಾಜ್ಯದ ಗೋಪುರ, ಮಹಾತ್ಮ ಗಾಂಧಿ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ, ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಮಹತ್ವದ ಘಟನೆ, ಕಾಂಗ್ರೆಸ್ ಸರಕಾರ ತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತಾದ ಮಾಹಿತಿಗಳು ಲೈಟಿಂಗ್ ನಲ್ಲಿ ಮೂಡಿಬಂದಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ವರ್ಷಪೂರ್ತಿ ಗಾಂಧಿ ಭಾರತ ಕಾರ್ಯಕ್ರಮ
ಸರ್ಕಾರ ಹಾಗೂ ಪಕ್ಷದ ವತಿಯಿಂದ ರಾಜ್ಯಾದ್ಯಂತ ಈ ಶತಮಾನೋತ್ಸವ ಗಾಂಧಿ ಭಾರತ ಕಾರ್ಯಕ್ರಮ ಆಚರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಚರ್ಚಾಸ್ಪರ್ಧೆ ನಡೆಸಲಾಗುವುದು. ಗಾಂಧಿ ತತ್ವ, ಆಚಾರ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು. ಪಕ್ಷ ಹಾಗೂ ಸರ್ಕಾರದ ವತಿಯಿಂದ ಈಗಾಗಲೇ ಗಾಂಧಿ ಜಯಂತಿ ಅಂಗವಾಗಿ ಕಳೆದ ಅಕ್ಟೋಬರ್ 2ರಂದು ಗಾಂಧಿ ನಡಿಗೆ ಪಾದಯಾತ್ರೆ ಮಾಡಿದ್ದೇವೆ, ವಿಧಾನಸೌಧದಲ್ಲಿ ಶಾಲಾ ಮಕ್ಕಳ ಜತೆ ಸಂವಾದ ಕಾರ್ಯಕ್ರಮ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ನನ್ನ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗಳಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ. ಕೇಂದ್ರ ಸರ್ಕಾರ ಕಾರ್ಯಕ್ರಮ ಮಾಡುವುದಾದರೆ ಮಾಡಲಿ. ನಾವು ಸಾಮಾನ್ಯರಂತೆ ಸೇವೆ ಮಾಡುತ್ತೇವೆ. ಗಾಂಧಿಜಿ ನಮ್ಮ ನಾಯಕರು. ಅವರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವುದು ನಮ್ಮ ಜವಾಬ್ದಾರಿ.
ಡಿ.ಕೆ ಶಿವಕುಮಾರ್ (ಉಪಮುಖ್ಯಮಂತ್ರಿ)