ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಆತ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಮನನೊಂದ ನರ್ಸ್ ತಂದೆ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಅಕ್ಟೋಬರ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಾಗಿದೆ. ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತ ಕೃತ್ಯ ಎಸಗಿದ್ದಾನೆ. ಏತನ್ಮಧ್ಯೆ, ಮಗಳ ಮೇಲಿನ ದಾಳಿಯಿಂದ ಮನನೊಂದ ಆಕೆಯ ತಂದೆ ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ
ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ ಆರೋಪಿ ಪ್ರಕಾಶ್, ಆಕೆ ಪ್ರೀತಿಸಲು ನಿರಾಕರಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕೈ ಚೀಲದಲ್ಲಿ ಮಚ್ಚು ಇಟ್ಟುಕೊಂಡು ಬಂದಿದ್ದ ಆತ, ಆಸ್ಪತ್ರೆಯ ಕೌಂಟರ್ಗೆ ನುಗ್ಗಿ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗೆಂದು ಪ್ರತಿ ದಿನ ಪೀಡಿಸುತ್ತಿದ್ದ ಆರೋಪಿ
ಬೆಳಗಾವಿಯ ಖಾಸಗಿ ಆಸ್ಪತ್ರೆ ಬಳಿಯ ಕಾಲೋನಿಯಲ್ಲಿ ನೆಲೆಸಿದ್ದ ಪ್ರಕಾಶ್, ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ. ಮದುವೆ ಆಗುವಂತೆ ಪ್ರತಿದಿನ ನರ್ಸ್ಗೆ ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ತನ್ನ ಕುಟುಂಬದ ಜೊತೆ ನರ್ಸ್ ಮನೆಗೆ ಹೋಗಿದ್ದ. ನರ್ಸ್ ಕುಟುಂಬಸ್ಥರ ಬಳಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ. ಆದರೆ ಮದುವೆ ಮಾಡಿಕೊಡಲು ನರ್ಸ್ ಕುಟುಂಬಸ್ಥರು ನಿರಾಕರಿಸಿದ್ದರು. ಇದಾದ ಬಳಿಕವೂ, ಮದುವೆ ಆಗುವಂತೆ ನರ್ಸ್ ಬೆನ್ನುಬಿದ್ದದ್ದ ಪ್ರಕಾಶ್, ಆಕೆ ಸ್ಪಂದಿಸದಿದ್ದಾಗ ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಏತನ್ಮಧ್ಯೆ ಮಗಳ ಮೇಲಿನ ಹಲ್ಲೆ ವಿಚಾರದಿಂದ ನೊಂದಿದ್ದ ನರ್ಸ್ ತಂದೆ ಮೃತಪಟ್ಟಿದ್ದಾರೆ. ಮಗಳ ಸ್ಥಿತಿ ಹೀಗಾಯ್ತಲ್ಲ ಎಂದು ನೊಂದಿದ್ದ ಅವರು, ಘಟನೆ ನಡೆದು 15 ದಿನದ ಬಳಿಕ ಮೃತಪಟ್ಟಿದ್ದಾರೆ. ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ ಇದ್ದ ಬಗ್ಗೆ ಅವರು ಹೆಚ್ಚು ಆತಂಕಕ್ಕೊಳಗಾಗಿದ್ದರು. ಜೈಲಿನಿಂದ ಹೊರಬಂದ ಬಳಿಕ ಆರೋಪಿ ಏನಾದರೂ ಮಾಡಿದಾನೆಂಬ ಆತಂಕ ಅವರನ್ನು ಕಾಡುತ್ತಿತ್ತು. ಇದೇ ಆತಂಕದಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ
ಸದ್ಯ ಇಬ್ಬರು ಹೆಣ್ಣು ಮಕ್ಕಳು ತಂದೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು, ತಾಯಿ ವಾಸ ಮಾಡುತ್ತಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸಂತ್ರಸ್ತೆ ನರ್ಸ್ ಹೇಳಿದ್ದಾರೆ.
ಮತ್ತೊಂದೆಡೆ, ಬೆಳಗಾವಿ ನಗರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಧ್ಯಾಹ್ನ ತುರ್ತುಸಭೆ ಕರೆದಿದ್ದಾರೆ.