ಬೆಳಗಾವಿ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಗೆ ಶಾಸಕರಿಗೆ ನಿಗದಿಪಡಿಸಿದ ಅನುದಾನದ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಪಪಡಿಸಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನು ಯಾವಾಗ ಆಯ್ಕೆ ಮಾಡುತ್ತಾರೆ ನಮಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಆ ನಿರ್ಧರಿಸುತ್ತದೆ. ಅದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವವರೆಗೆ ನಾವು ಕಾಯಬೇಕಷ್ಟೇ ಎಂದು ಹೇಳಿದರು.
ಬೆಂಗಳೂರಿನಲ್ಲಿ ಆರ್.ಸಿ.ಬಿ. ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ ಉಂಟಾದ ಸಾವು-ನೋವಿನ ಕುರಿತು ನ್ಯಾಯಮೂರ್ತಿಗಳು ಸರ್ಕಾರಕ್ಕೆ ಸುದೀರ್ಘ ವರದಿ ಸಲ್ಲಿಸಿದ್ದಾರೆ. ನಮ್ಮ ಅನುಮತಿ ಇಲ್ಲದೇ ಮಾಡಿದ್ದರು ಅಂತಾ ಸರ್ಕಾರ ಆವಾಗಲೇ ಹೇಳಿತ್ತು. ಅದೇ ವಿಚಾರ ವರದಿಯಲ್ಲಿ ಬಂದಿದೆ. ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಹಾಗಾಗಿ, ಆ ವರದಿಯನ್ನು ಅಧ್ಯಯನ ಮಾಡಿ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಹಿಡಕಲ್ ಜಲಾಶಯ ಬಹುತೇಕ ಭರ್ತಿ ಹಂತ ತಲುಪಿದೆ. ಕಳೆದ ವಾರದಿಂದ ಐದು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುತ್ತಿದ್ದೇವೆ. ಒಳಹರಿವಿನ ಪ್ರಮಾಣ ಆಧರಿಸಿ ಮತ್ತಷ್ಟು ಹೆಚ್ಚು ನೀರು ಹೊರ ಬಿಡಲಾಗುತ್ತದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.