Thursday, October 16, 2025
Google search engine
Homeಜಿಲ್ಲಾಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್ ಗಳನ್ನು ನೀಡಲಾಗುವುದು: ಸಚಿವ ರಾಮಲಿಂಗಾರೆಡ್ಡಿ
spot_img

ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್ ಗಳನ್ನು ನೀಡಲಾಗುವುದು: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್ ಗಳನ್ನು ನೀಡಲಾಗುವುದು. ಅದರಲ್ಲಿ ನಗರ ಸುತ್ತಮುತ್ತ ಸಂಚಾರಕ್ಕೆ 100 ಎಲೆಕ್ಟ್ರಿಕ್ ಬಸ್ ಗಳನ್ನು ಸಹ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಳಗಾವಿಯಲ್ಲಿ ಇಂದು ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಒಟ್ಟು 700 ಬಸ್ ಕೊಡುತ್ತಿದ್ದೇವೆ. ಅದರಲ್ಲಿ ಬೆಳಗಾವಿ ಜಿಲ್ಲೆಗೆ 300 ಬಸ್ ಕೊಡುತ್ತೇವೆ. ಇದರಲ್ಲಿ 100 ಎಲೆಕ್ಟ್ರಿಕಲ್ ಬಸ್ ಕೂಡ ಇರಲಿದ್ದು. ನಾನು ಸಾರಿಗೆ ಸಚಿವನಾಗಿದ್ದಾಗ ಈ ಭಾಗಕ್ಕೆ ಹಳೆ ಬಸ್ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 100 ಹಳೆ ಬಸ್ ನೀಡಿದ್ದರು. ಆದರೆ, ನಾವು ಹೊಸ ಬಸ್ ಗಳನ್ನು ಕೊಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬೆಳಗಾವಿ ಸಿಟಿ ಬಸ್ ನಿಲ್ದಾಣ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯದ ಅನುದಾನದಲ್ಲಿ  ನಿರ್ಮಾಣ ಮಾಡಲಾಗಿದೆ. ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದಲೇ ಲೋಕಾರ್ಪಣೆ ಮಾಡಿಸುತ್ತೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಎಂಟಿಸಿ ಬಸ್ ಗುದ್ದಿ ಐವರ ಸಾವಿನ ಕುರಿತು ಪ್ರತಿಕ್ರಯಿಸಿದ ಅವರು,  ಒಂದು ದಿನಕ್ಕೆ 1 ಲಕ್ಷ 80 ಸಾವಿರ ಟ್ರಿಪ್ ಗಳಿರುತ್ತವೆ. ಎಲ್ಲೋ ಒಂದು ಆಕಸ್ಮಿಕವಾಗಿ ಆಗಿದೆಯೋ ಅಥವಾ ಅವರಿಗೆ ಏನಾದರೂ ಖಾಯಿಲೆ ಇತ್ತೋ ಎನ್ನುವ ಬಗ್ಗೆ ತನಿಖೆ ಮಾಡುವಂತೆ ಹೇಳಿದ್ದೇನೆ. ಹಿಂದೆ ನಾನು ಸಾರಿಗೆ ಮಂತ್ರಿ ಆಗಿದ್ದಾಗಲೂ ಈ ರೀತಿ ಘಟನೆ ಆಗಿರಲಿಲ್ಲ. ಈ ದುರಂತದಿಂದ ಸಹಜವಾಗಿ ಎಲ್ಲರಿಗೂ ದುಃಖವಾಗಿದೆ ಎಂದರು.

ಇನ್ನು ಜಿಲ್ಲಾ, ತಾಲ್ಲೂಕಾ ಮಟ್ಟದಲ್ಲಿ ಕಳೆದ 20 ವರ್ಷಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಕಡೆಗಳಲ್ಲೂ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕರಿಗೆ ತ್ವರಿತ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಸಾರಿಗೆ ಇಲಾಖೆ ಕೂಡ ಒಂದಾಗಿದೆ. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿಗಳು ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಬ್ಬಂದಿಗಳ ಕೊರತೆ ಕಡಿಮೆಯಾಗಲಿದೆ ಎಂದರು.

ಬೈಲಹೊಂಗಲದಲ್ಲಿ 5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ “ಸ್ವಯಂ ಚಾಲಿತ ಚಾಲನಾ ಪಥ” ವನ್ನೂ ಇಂದು ಉದ್ಘಾಟನೆ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸಲಾಗುವುದು. ಕರ್ಕಶ ಹಾರ್ನ್, ಹೆಚ್ಚು ಪ್ರಕಾಶದ ಲೈಟ್ ಗಳು ಇರುವ ವಾಹನಗಳನ್ನು ಗುರುತಿಸಿ ದಂಡಗಳನ್ನು ವಿಧಿಸಬೇಕು. ಸಾರಿಗೆ ಇಲಾಖೆಯ ಕಚೇರಿಯಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಿ.ಎಂ ಸಿದ್ದರಾಮಯ್ಯ ಅನುಮೋದನೆಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಶ್ರಮದಿಂದ ನಗರದಲ್ಲಿ ಸಾರಿಗೆ ಇಲಾಖೆ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ. ಜಿಲ್ಲೆಯ ಅಗತ್ಯ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಪಟ್ಟಿ ತಯಾರಿಸಲಾಗಿದೆ. ಜನರ ಬೇಡಿಕೆಯಂತೆ ಹೆಚ್ಚುವರಿಯಾಗಿ ಬಸ್ ಗಳನ್ನು ಜಿಲ್ಲೆಗೆ ನೀಡಬೇಕು. ಅಂದಾಜು 500 ಬಸ್ ಗಳನ್ನು ಜಿಲ್ಲೆಗೆ ನೀಡಿದಲ್ಲಿ, ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕೆ ಅನುಕೂಲವಾಗಲಿದೆ ಎಂದು ಬೇಡಿಕೆ ಇಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ,  ರಾಜ್ಯದ ಎರಡನೇ ರಾಜ್ಯಧಾನಿ ಎಂದು ಬೆಳಗಾವಿ ಜಿಲ್ಲೆ ಗುರುತಿಸಿಕೊಂಡಿದೆ. ಬಹಳ ದೊಡ್ಡದಾಗಿ ಜಿಲ್ಲೆಯ ವಿಸ್ತೀರ್ಣ ಇರುವುದರಿಂದ ಇನ್ನಷ್ಟು ಬಸ್ ಗಳ ಸೌಲಭ್ಯದ ಅವಶ್ಯಕತೆ ಇದೆ. ಇನ್ನು ಸಾರಿಗೆ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಮಧ್ಯವರ್ತಿಗಳ ಹಾವಳಿ ಇದೆ ಎಂದು ಆರೋಪವಿದೆ ಹಾಗಾಗಿ ಮಧ್ಯವರ್ತಿಗಳ ಪ್ರವೇಶ ನಿರ್ಬಂಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಿಂದ ಇಲಾಖೆಯ ಸಿಬ್ಬಂದಿಗಳು ಸೇವೆಗಳು ಒದಗಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮಾತನಾಡಿ, ಜಿಲ್ಲೆಯ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಇನ್ನಿತರ ಸಿಬ್ಬಂದಿಗಳ ಕೊರತೆ ಬಹಳಷ್ಟಿದೆ. ಸದ್ಯ ಇರುವ ಸಿಬ್ಬಂದಿಗಳ ಮೇಲಿರುವ ಹೊರೆ ಕಡಿಮೆ ಮಾಡಲು ಅದಷ್ಟು ಬೇಗ ಮತ್ತಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸಹಾಯವಾಗಲಿದೆ ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರು ಆಗಿರುವ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಎ. ಎಂ, ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ಧಾರವಾಡ ಉತ್ತರದ (ಪ್ರವರ್ತನ) ಅಪರ ಸಾರಿಗೆ ಆಯುಕ್ತರಾದ ಕೆ. ಟಿ ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎಂ. ಪಿ.ಓಂಕಾರೇಶ್ವರಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ್ ಮುಂಡಾಸ, ನಿವೃತ್ತ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ಮ ಸೇರಿ ಮತ್ತಿತರರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!