ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಹೊಟೆಲ್ ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದು, ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಶಂಕೆ ಮೇರೆಗೆ ವಿಚಾರಣೆಗೊಳಪಡಿಸಲಾಗಿದ್ದವರ ಪೈಕಿ ಓರ್ವ ಶಂಕಿತ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 11.40ರ ವೇಳೆಗ ಆಗಂತುಕ ರಾಮೇಶ್ವರಂ ಕೆಫೆ ಬಂದಿದ್ದಾನೆ. ಹೆಗಲಿಗೆ ಸೈಡ್ ಬ್ಯಾಗ್, ತಲೆಗೆ ಟೋಪಿ ಹಾಕಿಕೊಂಡು ರಾಮೇಶ್ವರಂ ಕೆಫೆ ಪ್ರವೇಶಿಸಿದ್ದಾನೆ. ಹೊಟೇಲ್ ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ. ನಂತರ ತಿಂಡಿ ತಿಂದು ಬ್ಯಾಗ್ ವೊಂದನ್ನ ಹ್ಯಾಂಡ್ ವಾಷ್ ಬಳಿ ಇರಿಸಿದ್ದಾನೆ. ಅಲ್ಲಿಂದ ಕೆಫೆ ಸಮೀಪದಲ್ಲಿರೋ ನಿಲ್ದಾಣದಿಂದ ಬಸ್ ಹತ್ತಿ ತೆರಳಿರೋ ಸಾಧ್ಯತೆಯಿದೆ.
ಗೃಹ ಸಚಿವರು ಸ್ಫೋಟ ಸ್ಥಳಕ್ಕೆ ಭೇಟಿ:
ಇಂದು ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ‘ಮಧ್ಯಾಹ್ನ 12ರ ಸುಮಾರಿಗೆ 30 ವರ್ಷದ ವ್ಯಕ್ತಿ ಬ್ಯಾಗ್ ತಂದಿಟ್ಟಿದ್ದ. ನಂತರ ಟೋಕನ್ ತೆಗೆದುಕೊಂಡು ರವೆ ಇಡ್ಲಿ ಸೇವಿಸಿ ಹೋಗಿದ್ದಾರೆ. ಟೈಮರ್ ಇಟ್ಟು ಮಧ್ಯಾಹ್ನ 12.55ಕ್ಕೆ ಕಡಿಮೆ ತೀವ್ರತೆ ಬಾಂಬ್ ಸ್ಫೋಟವಾಗಿದೆ. ಸ್ಫೋಟದಲ್ಲಿ ಗ್ರಾಹಕರು, ಸಿಬ್ಬಂದಿ ಸೇರಿ 10 ಜನ ಗಾಯಗೊಂಡಿದ್ದಾರೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಜೀವಕ್ಕೆ ಅಪಾಯವಿಲ್ಲ. ಬ್ಯಾಗ್ ತಂದಿಟ್ಟಿದ್ದ ವ್ಯಕ್ತಿಯ ಚಹರೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸ್ ಇಲಾಖೆಯ ವಿವಿಧ ತಂಡಗಳು ತನಿಖೆ ನಡೆಸುತ್ತಿವೆ. ಕೆಲವೇ ಕ್ಷಣದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಲಿದ್ದಾರೆ. ಬೆಂಗಳೂರು ಸುರಕ್ಷಿತವಾಗಿದೆ, ಜನರು ಆತಂಕಪಡುವುದು ಬೇಡ ಎಂದು ಹೇಳಿದರು.
ಬ್ಯಾಗ್ ಇಟ್ಟು ಹೋದ 1 ಗಂಟೆ ಬಳಿಕ ಸ್ಫೋಟ
ಬ್ಯಾಗ್ ಇಟ್ಟು ಒಂದು ಘಂಟೆಯ ನಂತರ ಬ್ಲಾಸ್ಟ್ ಆಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ಯಾರೆಂದು ಆಲ್ ಮೋಸ್ಟ್ ಗೊತ್ತಾಗಿದೆ. ಆರೋಪಿ ಪತ್ತೆಗಾಗಿ ಸಿಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದು, ಕೆಲವೇ ಘಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಲಾಗತ್ತದೆ ಎಂದು ಅವರು ಹೇಳಿದರು.
ಶಂಕಿತ 28-30 ವರ್ಷ ವಯಸ್ಸಿನವನಾಗಿದ್ದು, BMTC ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಬಂದು ಕೂಪನ್ ಖರೀದಿಸಿ, ರವಾ ಇಡ್ಲಿ ಆರ್ಡರ್ ಮಾಡಿ, ಬ್ಯಾಗ್ ಇಟ್ಟು ಹೊರಟುಹೋಗಿದ್ದಾನೆ. ಶೋಧ ಕಾರ್ಯಕ್ಕಾಗಿ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ.
ಆಸ್ಪತ್ರೆಯಲ್ಲಿ ಗಾಯಾಳುಗಳ ಭೇಟಿ ಮಾಡಿದ ರಾಜ್ಯಪಾಲ ಗೆಹ್ಲೋಟ್
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿಯಾಗಿ, ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಅವರು ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ರಾಜ್ಯಪಾಲರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಸಂಸದ ಪಿಸಿ ಮೋಹನ್ ಸಹ ಇದ್ದರು.