ಮಂಡ್ಯ: ನನಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ, ಅದರಲ್ಲಿ ಅನುಮಾನವಿಲ್ಲ. ಆದರೆ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ನನ್ನ ಹೋರಾಟ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯಾದ ತಕ್ಷಣ ನನ್ನ ಜೊತೆ ಶತ್ರುತ್ವ ಬೆಳೆಯಬೇಕು ಎಂದೇನೂ ಇಲ್ಲ. ಜೆಡಿಎಸ್ ಈಗ ಎನ್ಡಿಎ ಭಾಗವಾಗಿದೆ. ನಾನೂ ಕೂಡ ಎನ್ಡಿಎ ಭಾಗವಾಗಿದ್ದೇನೆ ಎಂದರು.
ನಿನ್ನೆ ನಡೆದ ಸಭೆಯಲ್ಲಿ ಬಹಳಷ್ಟು ಮಂದಿ ನೀವು ಮಂಡ್ಯ ಬಿಟ್ಟು ಹೋಗಬೇಡಿ, ನಾವು ನಿಮ್ಮನ್ನು ನಂಬಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ನನಗೆ ಟಿಕೆಟ್ ನೀಡುವುದು ಖಚಿತ. ಮಂಡ್ಯ ಕ್ಷೇತ್ರದಲ್ಲೇ ಬಿಜೆಪಿ ಟಿಕೆಟ್ ಸಿಗಬೇಕು ಎನ್ನುವುದು ನನ್ನ ಆಶಯ. ಈ ಬಗ್ಗೆ ಹೈಕಮಾಂಡ್ ನಾಯಕರಿಗೂ ನಾನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದಲೂ ಸಂಸದೆಯಾಗಿ ನಾನು ಬಿಜೆಪಿಗೆ ಸಂಸತ್ನಲ್ಲಿ ಎಲ್ಲಾ ಹಂತದಲ್ಲೂ ಬೆಂಬಲ ನೀಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದೇನೆ. ಜನರ ಅಭಿಪ್ರಾಯ ಕೂಡ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡರೆ ಪಕ್ಷ ಸಂಘಟನೆ ಬಲಗೊಳ್ಳುತ್ತದೆ ಎಂಬುದಾಗಿದೆ ಎಂದರು.
ನನಗೆ ಬಿಜೆಪಿ ಟಿಕೆಟ್ ಸಿಕ್ಕರೆ ಜೆಡಿಎಸ್ನವರು ಮೈತ್ರಿ ಧರ್ಮದ ಭಾಗವಾಗಿ ನನಗೆ ಬೆಂಬಲ ನೀಡಿಯೇ ನೀಡುತ್ತಾರೆ. ನಾನು ಕೂಡ ಅವರ ಬೆಂಬಲ ಕೇಳುತ್ತೇನೆ ಎಂದು ಹೇಳಿದರು.