ಬೆಳಗಾವಿ: 10 ಸಾವಿರ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಸಾವಿರಾರು ಆಶಾ ಕಾರ್ಯಕರ್ತೆಯರು, ಮೂರನೇ ದಿನವಾದ ಗುರುವಾರ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಧರಣಿ ಮುಕ್ತಾಯಗೊಳಿಸುವ ಮುನ್ನ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕಮೀಷನರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಧರಣಿ ಕೊನೆಗೊಳಿಸಿದರು.
ಶಿಕ್ಷಣ ಇಲಾಖೆಯ ಮೌಲ್ಯ ಮಾಪನ ಕೆಲಸವನ್ನು ಆಶಾಗಳಿಗೆ ವಹಿಸಬಾರದು, ಭರವಸೆ ನೀಡಿದಂತೆ 10 ಸಾವಿರ ವೇತನ ನೀಡಬೇಕು. ಆಶಾಗಳನ್ನು ಕೆಲಸದಿಂದ ತೆಗೆಯಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎ.ಐ.ಯು.ಟಿ.ಯು.ಸಿ ಸಂಯುಕ್ತಾಶ್ರಯದಲ್ಲಿ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಆಶಾಗಳೆ ಒಂದಾಗಿ ಹೋರಾಟಕ್ಕೆ ಮುಂದಾಗಿ ಎಂಬ ಘೋಷಣೆಗಳೊಂದಿಗೆ ಗುರುವಾರ ಮೂರನೇ ದಿನವು ಬೆಳಗಾವಿಯಲ್ಲಿ ಬೀದಿಗಿಳಿದ ಸಾವಿರಾರು ಆಶಾ ಕಾರ್ಯಕರ್ತೆಯರು ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನುಡಿದಂತೆ ನಡೆಯದ ಸರ್ಕಾರ, ಕೊಟ್ಟ ಮಾತು ಉಳಸಿಕೊಳ್ಳಿ, ಆಶಾಗಳೆ ಒಂದಾಗಿ ಹೋರಾಟಕ್ಕೆ ಮುಂದಾಗಿ ಎಂಬ ಘೋಷಣೆಗಳನ್ನು ಮೊಳಗಿಸಿದರು.