ಬೆಳಗಾವಿ : ಮಾಜಿ ಸಚಿವ, ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.
ಗೋಕಾಕ್ನ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಂತೋಷ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಅವರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.
ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆಯಲ್ಲಿ ನೂರಾರು ಜನರ ನಡುವೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಫೈರಿಂಗ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಗೋಕಾಕ್ ಶಹರ್ ಪೊಲೀಸರು ಸಂತೋಷ ಜಾರಕಿಹೊಳಿ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರನ್ನು ಸಂಪರ್ಕಿಸಿದಾಗ, ‘ರಮೇಶ್ ಜಾರಕಿಹೊಳಿ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಗಮನಕ್ಕೆ ಬಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಆಧರಿಸಿ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ