ಬೆಳಗಾವಿ: 18 ವರ್ಷದ ಬಳಿಕ ಬಸರಿಕಟ್ಟಿ ಗ್ರಾಮದ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಿಯ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮದೇ ಮನೆಯ ಕಾರ್ಯಕ್ರಮವೆನ್ನುವಂತೆ ಸಮಗ್ರ ವ್ಯವಸ್ಥೆಯ ಹೊಣೆ ನಿರ್ವಹಿಸುತ್ತಿದ್ದಾರೆ.
ಜಾತ್ರೆಯ ದಿನ ನಿರ್ಣಯವಾಗುತ್ತಿದ್ದಂತೆ ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಆಗಬೇಕಿರುವ ಕೆಲಸಗಳ ಸಂಪೂರ್ಣ ವಿವರ ಪಡೆದರು. ಗ್ರಾಮದ ಸಮಗ್ರ ಅಭಿವೃದ್ಧಿ ಮತ್ತು ಜಾತ್ರೆಯ ವೇಳೆ ಸೇರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲು ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ ಸಚಿವರು, ತಾವು ಸ್ವತಃ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಅವರ ಮೂಲಕ ಪ್ರತಿಯೊಂದು ಕೆಲಸದ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ.
ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗೂ ಅಗತ್ಯ ವ್ಯವಸ್ಥೆ ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಗ್ರಾಮದಲ್ಲಿ ಈಗಾಗಲೇ ಪೇವರ್ಸ್ ಅಳವಡಿಕೆ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳ ಡಾಂಬರೀಕರಣ, ವಿದ್ಯುತ್ ಕಂಬಗಳ ಅಳವಡಿಕೆ, ವಿದ್ಯುತ್ ವಿತರಕಗಳ ಸ್ಥಳಾಂತರ, ನಿರಂತರ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಜಾತ್ರೆಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಗಳಾಗಬೇಕು, ಜಾತ್ರೆ ಸಂಪೂರ್ಣ ನಿರ್ವಿಘ್ನವಾಗಿ ನಡೆಯಬೇಕು, ದೇವರ ಕೆಲಸದಲ್ಲಿ ಸ್ವಲ್ಪವೂ ಲೋಪವಾಗಬಾರದೆನ್ನುವ ಉದ್ದೇಶವಿಟ್ಟುಕೊಂಡು ಮನೆಯ ಮಗಳಂತೆ ಲಕ್ಷ್ಮೀ ಹೆಬ್ಬಾಳಕರ್ ಕಾಳಜಿ ವಹಿಸುತ್ತಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅತ್ಯಂತ ಕಾಳಜಿ ತೆಗೆದುಕೊಂಡು ನಮ್ಮೂರ ಜಾತ್ರೆಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಅವರಿರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಭಾರವಾಗಿಲ್ಲ. ಈ ಬಾರಿಯ ಜಾತ್ರೆಯನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸಲು ಎಲ್ಲ ರೀತಿಯಿಂದ ಅವರು ಸಹಕರಿಸುತ್ತಿದ್ದಾರೆ ಎಂದು ಜಾತ್ರಾ ಸಮಿತಿಯವರು ಹಾಗೂ ಗ್ರಾಮಸ್ಥರು ತಿಳಿಸಿದರು.