ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿಯಲ್ಲಿ ಇಟ್ಟಿದ್ದ ಮುಸ್ಲಿಂ ಧರ್ಮಗ್ರಂಥ ಕುರಾನ್ ನನ್ನು ಯಾರೋ ಕಿಡಿಗೇಡಿಗಳು ಹೊತ್ತೊಯ್ದು ಸುಟ್ಟು ಹಾಕಿರುವ ಘಟನೆಗೆ ಮುಸ್ಲಿಂರು ಸಿಡಿದೆದ್ದಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಇಂದು ಮುಸ್ಲಿಂ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಹೌದು, ಮೇ 11ರಂದು ಸಂತಿಬಸ್ತವಾಡ ಗ್ರಾಮದ ಮಸೀದಿಯಲ್ಲಿ ಇಟ್ಟಿದ್ದ ಮುಸ್ಲಿಮರ ಪವಿತ್ರ ಕುರಾನ್ ಗ್ರಂಥವನ್ನು ಯಾರೋ ದುಷ್ಕರ್ಮಿಗಳು ಹೊತ್ತೊಯ್ದು, ಮಸೀದಿಯ 100 ಮೀಟರ್ ಅಂತರದಲ್ಲಿ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದರು. ಈ ಘಟನೆ ಮುಸ್ಲಿಂ ಸಮಾಜದ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇದರಿಂದ ಅವರು ಕೆರಳಿದ್ದಾರೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸಭೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಮೂರು ದಿನಗಳೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮೂರು ದಿನಗಳು ಕಳೆದರೂ ಆರೋಪಿಗಳ ಸುಳಿವು ಪತ್ತೆಯಾಗದ ಹಿನ್ನೆಲೆ ಇಂದು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಸತತ ಒಂದೂವರೆ ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಕೈಯಲ್ಲಿ ಭಾರತ ಧ್ವಜ, ಇಸ್ಲಾಂ ಧರ್ಮದ ಧ್ವಜ ಹಿಡಿದು,
ನಾರಾ ತಕ್ದೀರ್, ಅಲ್ಲಾಹು ಅಕ್ಬರ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಜೊತೆಗೆ ಪವಿತ್ರ ಕುರಾನ್ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಭಿತ್ತಿ ಪತ್ರ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಈ ರೀತಿ ಘಟನೆ ನಡೆದಿಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅವರು ಯಾರು..? ಮತ್ತು ಅವರಿಗೆ ಯಾರು ಕುಮ್ಮಕ್ಕು ಕೊಟ್ಟಿದ್ದಾರೆ..? ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು. ಇತ್ತೀಚೆಗೆ ರಾಜ್ಯದಲ್ಲಿ ಕೆಲ ರಾಜಕಾರಣಿಗಳು, ಬಿಜೆಪಿ ಮತ್ತು ಸಂಘ ಪರಿವಾರ ಕೋಮು ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಇದೇ ಪ್ರೇರಣೆಯಿಂದ ಕುರಾನ್ ಸುಟ್ಟು ಹಾಕಲಾಗಿದೆ. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ಕಿಡಿಗೇಡಿಗಳನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು. ತಪ್ಪಿತಸ್ಥ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಕುರಾನ್ ಸುಟ್ಟಿರುವುದು ಅತ್ಯಂತ ಕೆಟ್ಟ ಮತ್ತು ದೊಡ್ಡ ಘಟನೆ. ಇದನ್ನು ಯಾರೂ ಸಹಿಸುವುದಿಲ್ಲ. ಹಿಂದೂ ಬಾಂಧವರು ಕೂಡ ಘಟನೆ ಖಂಡಿಸಿದ್ದಾರೆ. ಇಂದು ಶಾಂತಿಯುತ ಪ್ರತಿಭಟನೆ ಮಾಡಿದ್ದು, 7 ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಅವರನ್ನು ಅಮಾನತ್ತು ಮಾಡಲಾಗಿದೆ. ಒಂದು ವಾರದೊಳಗೆ ಆರೋಪಿಗಳ ಬಂಧನ ಆಗದಿದ್ದರೆ ಸಮಾಜ ಬಾಂಧವರ ಹೇಳಿದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಮುಂಜಾಗ್ರತ ಕ್ರಮವಾಗಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಖುದ್ದು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೂಡ ಸ್ಥಳದಲ್ಲಿ ಹಾಜರಿದ್ದು, ಭದ್ರತೆ ಪರಿಶೀಲಿಸಿದರು.