ಬೆಳಗಾವಿ: ಆಪರೇಷನ್ ಸಿಂಧೂರ” ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಪರಾಕ್ರಮಕ್ಕೆ ಇಡೀ ದೇಶವೇ ಸಂಭ್ರಮ ಪಡುತ್ತಿದೆ. ಇನ್ನು ಈ ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಸೊಸೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹೌದು, ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ. ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸೋಫಿಯಾ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಸೋಫಿಯಾ ಪತಿ ತಾಜುದ್ದೀನ್ ಬಾಗೇವಾಡಿ. ಪತಿ ಹಾಗೂ ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
2015ರಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಸೋಫಿಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ ಸೋಫಿಯಾ ಖುರೇಷಿ ಮೂಲತಃ ಗುಜರಾತ್‌ನವರು. ಇವರು 1981ರಲ್ಲಿ ಗುಜರಾತ್‌ನ ವಡೋದರಾದಲ್ಲಿ ಜನಿಸಿದ್ದಾರೆ. ಜೀವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಫಿಯಾ ಅಜ್ಜ ಕೂಡ ಭಾರತೀಯ ಸೇನೆಯಲ್ಲಿದ್ದರು. ಅವರ ತಂದೆ ಕೂಡ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸೋಫಿಯಾ ಖುರೇಷಿ 1999ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು.
2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿ ಗಮನ ಸೆಳೆದಿದ್ದ ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬುದು ಅವರ ಹೆಗ್ಗಳಿಕೆ.