ಬೆಳಗಾವಿ: ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನೀವೇ ಬುದ್ಧಿವಾದ ಹೇಳಿ, ಸರಿಪಡಿಸಬೇಕು. ಇಲ್ಲದಿದ್ದರೆ ನೀವು ಎಲ್ಲಿಯೂ ಕಾರ್ಯಕ್ರಮ ಮಾಡಲು ನಾನು ಬಿಡುವುದಿಲ್ಲ. ಎಲ್ಲ ರೀತಿಯ ಪ್ರತಿಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ. ನಾನು ಮನವಿ ಮಾಡಿಕೊಳ್ಳುತ್ತಿಲ್ಲ. ಇದು ನಿಮಗೆ ಎಚ್ಚರಿಕೆ ಗಂಟೆ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ ಸವಾಲು ಹಾಕಿದರು.
ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಮುಗಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದೇ ಮೊದಲ ಬಾರಿ ಬಿಜೆಪಿಯವರು ನಾಲ್ಕು ಜನರ ಕಾರ್ಯಕರ್ತರನ್ನು ಕಳಿಸಿ ಕೊಟ್ಟಿದ್ದಾರೆ. ನಮ್ಮ ಪ್ರತಿಭಟನೆ ಕಾರ್ಡ್ ಇಟ್ಟುಕೊಂಡು ಕಪ್ಪು ಬಾವುಟ ಪ್ರದರ್ಶಿಸಿ, ಕೂಗಾಟ ಮಾಡಿ ಗದ್ದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಇದು ಸರಿಯಲ್ಲ. ಈ ಪ್ರವೃತ್ತಿ ಮುಂದುವರಿಸಿದರೆ ಇಡೀ ರಾಜ್ಯದಲ್ಲಿ ಒಂದು ಸಭೆಯನ್ನೂ ಮಾಡಲು ಬಿಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆಯಾಗಿದೆ ಎಂದು ಎಚ್ಚರಿಸಿದರು.
ಈ ವರ್ತನೆ ನೀವು ನೆಟ್ಟಗೆ ಮಾಡಿಕೊಂಡರೆ ಸರಿ. ಇದೇ ರೀತಿ ದುರ್ವರ್ತನೆ ಮುಂದುವರಿಸಿದರೆ ನಿಮ್ಮ ವಿರುದ್ಧ ನಿಮಗಿಂತ ಜಾಸ್ತಿ ಹೋರಾಟ ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಭಗವಂತ ಮತ್ತು ರಾಜ್ಯದ ಜನತೆ ನನಗೆ ಕೊಟ್ಟಿದ್ದಾರೆ ಎಂದು ಡಿ.ಕೆ.ಶಿವಕುಮಾರ ಕಿಡಿಕಾರಿದರು.
ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯವರ ಬಳಿ ಹೋಗಿ ನಿಮ್ಮಿಂದ ಬೆಲೆ ಏರಿಕೆ ಆಗಿದೆ. ಇದಕ್ಕೆ ನೀವು ಮೊದಲು ಉತ್ತರ ಕೊಡಿ ಅಂತಾ ಕೇಳುವಂತೆ ಕರೆ ನೀಡಿದ ಡಿ.ಕೆ.ಶಿವಕುಮಾರ, ಬೆಲೆ ಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಅನುಕೂಲ ಆಗಲಿ ಅಂತಾ ನಾವು 52 ಸಾವಿರ ಕೋಟಿ ಖರ್ಚು ಮಾಡಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಜನರ ಬದುಕು ಸುಧಾರಿಸುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೆಂಗಳೂರು, ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದ ಬಳಿಕ ಇಂದು ಬೆಳಗಾವಿಯಲ್ಲಿ ಮಾಡಿದ್ದೇವೆ. ಮುಂದೆ ಹುಬ್ಬಳ್ಳಿ-ಧಾರವಾಡದಲ್ಲಿ ಹಮ್ಮಿಕೊಂಡಿದ್ದೇವೆ. ಸಂವಿಧಾನ ರಕ್ಷಣೆ ಮತ್ತು ಬೆಲೆ ಏರಿಕೆ ವಿರುದ್ಧ ಹೋರಾಟ ಕೈಗೊಂಡಿದ್ದೇವೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಚಿನ್ನ ಸೇರಿ ಅಗತ್ಯ ವಸ್ತುಗಳ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ. ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ ಆರೋಪಿಸಿದರು.