Tuesday, April 29, 2025
Google search engine
Homeರಾಜಕೀಯನಾವು ಬಿಜೆಪಿ-ಆರ್.ಎಸ್.ಎಸ್. ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ
spot_img

ನಾವು ಬಿಜೆಪಿ-ಆರ್.ಎಸ್.ಎಸ್. ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ

 

ಬೆಳಗಾವಿ: ನಾವು ಪ್ರತಿಭಟನೆ ಮಾಡುವ ಸ್ಥಳದಲ್ಲಿ ಬಂದು ಸಮಯ ವ್ಯರ್ಥ ಪಡಿಸಲು ಬಂದರೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕುಗ್ಗಲ್ಲ. ನಾವು ಬಿಜೆಪಿ-ಆರ್.ಎಸ್.ಎಸ್. ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಸಂವಿಧಾನ ರಕ್ಷಿಸಿ ದೇಶ ಉಳಿಸಿ, ಬೇಕಿತ್ತಾ ದುಬಾರಿ ಬಿಜೆಪಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು‌. ಈ ವೇಳೆ ತಮ್ಮ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿ ಕಾರ್ಯಕರ್ತೆಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿ, ಆರ್ ಎಸ್ಎಸ್ ನಮ್ಮ‌ ಮುಂದೆ ಬಾಲ ಬಿಚ್ಚಲು ಸಾಧ್ಯವಿಲ್ಲ. ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಇಂಥ ದುಷ್ಕೃತ್ಯ ಮಾಡುವ ಬಿಜೆಪಿಯವರಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಧಿಕ್ಕಾರ ಕೂಗುತ್ತೇನೆ ಎಂದು ವಾಗ್ದಾಳಿ ಮಾಡಿದರು.

ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಯಾರು ಜನರಿಗೆ ಟೋಪಿ ಹಾಕಿ, ಮೋಸ ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಬೇಕಿದೆ‌. ಜಾತಿ, ಧರ್ಮದ ಹೆಸರಿನಲ್ಲಿ ನಾಡು ಮತ್ತು ಸಮಾಜವನ್ನು ಇವರು ಛಿದ್ರ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪೆಟ್ರೋಲ್ 70, ಡೀಸೆಲ್ 49-50, ಗ್ಯಾಸ್ 414, ಕ್ರೂಡೈಲ್ ಬೆಲೆ 1 ಬ್ಯಾರಲ್ ಬೆಲೆ 125 ಡಾಲರ್ ಆಗಿತ್ತು. ಇಂದು 1 ಬ್ಯಾರಲ್ ಕ್ರೂಡೈಲ್ ಬೆಲೆ 62 ಡಾಲರ್ ಆಗಿದೆ. ಅರ್ಧದಷ್ಟು ಕಡಿಮೆ ಆಗಿದೆ. ಆದರೆ, ಪೆಟ್ರೋಲ್, ಡೀಸೆಲ್ ಕಡಿಮೆ ಅಗಿದೆಯೇ..? ಜನಾಕ್ರೋಶ ಯಾತ್ರೆ ಮಾಡಲು ನಿಮಗೆ ಏನು ನೈತಿಕತೆಯಿದೆ. ನಿಮಗೆ ಮಾನ, ಮರ್ಯಾದೆ ಇಲ್ಲ. ನಾವು ಬೆಲೆ ಏರಿಸಿದ್ದೇವೆ ಎನ್ನುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಕಿಡಿಕಾರಿದರು‌.

ಸಮಾಜದಲ್ಲಿ ಬೆಂಕಿ ಹಚ್ಚಿ, ಸಮಾಜ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ನಿಮ್ಮ ವಿರುದ್ಧದ ಪ್ರತಿಭಟನೆ ನಿಲ್ಲಿಸುವುದಿಲ್ಲ. ಈ ಹಿಂದೆ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರಿ. ಹಾಗಾಗಿ, 2023ರಲ್ಲಿ ನಿಮ್ಮನ್ನು ಸೋಲಿಸಿ 136 ಸೀಟ್ ಕೊಟ್ಟು ನಮ್ಮನ್ನು ರಾಜ್ಯದ ಜನ ಗೆಲ್ಲಿಸಿದ್ದಾರೆ. ಮತ್ತೆ 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಗುಡುಗಿದರು.

ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡಿದಾಗ ಒಬ್ಬ ಪೊಲೀಸ್, ಸೈನಿಕ ಇರಲಿಲ್ಲ. ಇದು ಭದ್ರತಾ ವೈಫಲ್ಯ ಅಲ್ಲವೇ..? ನಿಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು..? ಅಮಾಯಕರ ಸಾವಿಗೆ ಯಾರು ಕಾರಣ. ಇದು ಮೋದಿ ವಿಫಲತೆ ಅಲ್ಲವೇ..? ಅಮಿತ್ ಷಾ ವಿಫಲತೆ ಅಲ್ಲವೇ..? ಇದನ್ನು ಪ್ರಶ್ನಿಸಿದರೆ ಯುದ್ಧ ಬೇಡ ಅಂತಾ ಹೇಳಿದೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಿಸುತ್ತಿರಿ. ಯುದ್ಧದ ಅಗತ್ಯತೆ ಇದೆಯಾ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಸದ್ಯಕ್ಕೆ ಅಗತ್ಯವಿಲ್ಲ ಅಂತಾ ಹೇಳಿದೆ. ಅಲ್ಲಿ ಭದ್ರತೆ ಕೊಡುವುದು ಬಿಟ್ಟು ಅದನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ದೇಶದ ರಕ್ಷಣೆ, ಅಖಂಡತೆ, ಸಾರ್ವಭೌಮಕ್ಕೆ ಧಕ್ಕೆ ತರಲು ಬಿಡಲ್ಲ.‌ ಯುದ್ಧಕ್ಕೆ ನಾವೂ ಸದಾಸಿದ್ಧ ಎಂದರು.

ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ‌ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ, ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆಗೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಸರ್ಕಾರಕ್ಕೆ ಆ ಶಕ್ತಿ ಇನ್ನೂ ಇದೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಸಂವಿಧಾನ ರಕ್ಷಣೆ, ದೇಶದ ಐಕ್ಯತೆ-ಸಮಗ್ರತೆ ಕಾಪಾಡಬೇಕು‌. ಬೆಲೆ ಏರಿಕೆ ತಪ್ಪಿಸಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಇಳಿಯುತ್ತಿದೆ ಎಂದು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವು. ಹಾಲಿನ ದರ ಏರಿಕೆಯಿಂದ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿ‌ ಸಿಲಿಂಡರ್, ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದ್ದಾರೆ. ನಾವು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ನಾಲ್ಕು ರೂ. ಹಾಲಿನ‌ ದರ ಏರಿಸಿದ್ದೇವೆ. ರಾಜ್ಯ ಬಿಜೆಪಿ ನಾಯಕರ ಆಕ್ರೋಶ ನಿಮ್ಮ ಬಿಜೆಪಿ, ಕೇಂದ್ರ ಸರ್ಕಾರದ ಮೇಲಿರಬೇಕು. ನಿಮ್ಮ ಬದುಕು ಹಸನು ಮಾಡಬೇಕು. ಬೆಲೆ ಏರಿಕೆ ಕಷ್ಟದಲ್ಲಿರುವ ನಿಮ್ಮನ್ನು ರಕ್ಷಿಸಬೇಕು ಎಂಬುದು ನಮ್ಮ ಉದ್ದೇಶ. ಕಾಂಗ್ರೆಸ್ ಖಜಾನೆ ಖಾಲಿ ಆಗುತ್ತದೆ ಎಂದು ಮೋದಿ ಹೇಳಿದ್ದರು. ಆದರೆ, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಕರ್ನಾಟಕ ಮಾಡೆಲ್ ಅಳವಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ನರೇಂದ್ರಸಿಂಗ್,
ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ‌.ಪಾಟೀಲ, ಎಚ್.ಸಿ.ಮಹಾದೇವಪ್ಪ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ ತಂಗಡಗಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ, ಸಲೀಂ ಅಹ್ಮದ್, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಮಹಾಂತೇಶ ಕೌಜಲಗಿ ಸೇರಿ ಮತ್ತಿತರರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!