ಧಾರವಾಡ: ಇತ್ತೀಚೆಗೆ ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಜನಿವಾರ ಕತ್ತರಿಸಿದ ಪ್ರಕರಣದಂತೆಯೇ ವಿದ್ಯಾಕಾಶಿ ಧಾರವಾಡದಲ್ಲೂ ಜನಿವಾರಕ್ಕೆ ಕತ್ತರಿ ಹಾಕಿದ್ದು, ಈಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ಹುರಕಡ್ಲಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲೆಂದು ಜೆಎಸ್‌ಎಸ್ ಕಾಲೇಜಿನ ನಂದನ್ ಏರಿ ಎಂಬ ವಿದ್ಯಾರ್ಥಿ ಬಂದಿದ್ದ. ಈತನ ಕೊರಳಲ್ಲಿದ್ದ ಜನಿವಾರ ಗಮನಿಸಿದ್ದ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟಿದ್ದಲ್ಲದೇ ನಂತರ ಆತನನ್ನು ಪರೀಕ್ಷಾ ಕೇಂದ್ರದ ಒಳಗಡೆ ಬಿಟ್ಟಿದ್ದಾರೆ.
ವಿದ್ಯಾರ್ಥಿ ತಾನು ಜನಿವಾರ ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ವಿನಂತಿಸಿದರೂ ಕೇಳದ ಸಿಬ್ಬಂದಿ, ಆ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟಿವುದರ ಮೂಲಕ ವಿಕೃತ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಇದರಿಂದ ವಿದ್ಯಾರ್ಥಿ ನಂದನ್ ಶಾಕ್‌ಗೆ ಒಳಗಾಗಿದ್ದಾನೆ. ಕತ್ತರಿಸಿದ ಜನಿವಾರನ್ನು ವಿದ್ಯಾರ್ಥಿ ತನ್ನ ಬ್ಯಾಗ್‌ನಲ್ಲೇ ಇಟ್ಟುಕೊಂಡಿದ್ದ. ಎರಡು ದಿನದ ಬಳಿಕ ಆತನಿಗೆ ಮನೆಯವರು ಹೊಸ ಜನಿವಾರ ಹಾಕಿದ್ದಾರೆ.
ಬೀದರ್, ಶಿವಮೊಗ್ಗದಲ್ಲಿ ನಡೆದ ಜನಿವಾರ ಗಲಾಟೆಯನ್ನು ನೋಡಿ ಕೊನೆಗೆ ನಂದನ್ ತನಗೂ ಆದ ಪರಿಸ್ಥಿತಿ ಬಗ್ಗೆ ತನ್ನ ತಂದೆಯ ಮುಂದೆ ಹೇಳಿದ್ದಾನೆ. ಅಲ್ಲಿಯವರೆಗೂ ಈ ಬಗ್ಗೆ ನಂದನ್ ಮನೆಯಲ್ಲಿ ಘಟನೆ ಕುರಿತು ಹೇಳಿರಲಿಲ್ಲ.
ಈ ಘಟನೆ ಕುರಿತು ವಿದ್ಯಾರ್ಥಿ ನಂದನ್ ತಂದೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಕತ್ತರಿಸಿದ್ದಕ್ಕೆ ಶಾಕ್‌ಗೆ ಒಳಗಾದ ತನ್ನ ಮಗನಿಗೆ ಸರಿಯಾಗಿ ಪರೀಕ್ಷೆ ಕೂಡ ಬರೆಯಲು ಆಗಿಲ್ಲ ಎಂದು ವಿದ್ಯಾರ್ಥಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ, ಬೀದರ್‌ನಂತೆಯೇ ಧಾರವಾಡದಲ್ಲೂ ಜನಿವಾರಕ್ಕೆ ಕತ್ತರಿ ಹಾಕಿದ ವಿಷಯ ಇದೀಗ ಸದ್ದು ಮಾಡಿದೆ.