Wednesday, June 18, 2025
Google search engine
Homeರಾಜ್ಯಎಲ್ಲಾ ಪೌರಕಾರ್ಮಿಕರ ಖಾಯಂ ಗೊಳಿಸುವ ಪ್ರಕ್ರಿಯೆ‌ ಚಾಲ್ತಿಯಲ್ಲಿದೆ : ಸಿದ್ದರಾಮಯ್ಯ
spot_img

ಎಲ್ಲಾ ಪೌರಕಾರ್ಮಿಕರ ಖಾಯಂ ಗೊಳಿಸುವ ಪ್ರಕ್ರಿಯೆ‌ ಚಾಲ್ತಿಯಲ್ಲಿದೆ : ಸಿದ್ದರಾಮಯ್ಯ

ಬೆಳಗಾವಿ: ಎಲ್ಲಾ ಪೌರಕಾರ್ಮಿಕರ ಖಾಯಂ ಗೊಳಿಸುವ ಪ್ರಕ್ರಿಯೆ‌ ಚಾಲ್ತಿಯಲ್ಲಿದೆ. ಇದಲ್ಲದೇ ಚಾಲಕರು, ನಿರ್ವಾಹಕರಿಗೂ ಕನಿಷ್ಠ‌ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲು ನಿರ್ಧರಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ಟಿಳಕವಾಡಿಯಲ್ಲಿ ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಆಧುನಿಕ‌ ಸೌಲಭ್ಯಗಳುಳ್ಳ ಬಹುಮಹಡಿ ಕಲಾ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಪೌರಕಾರ್ಮಿಕರನ್ನು ಖಾಯಂ ಮಾಡಲು ನಿರ್ಧರಿಸಲಾಗಿತ್ತು. ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಕಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ. ಗುತ್ತಿಗೆದಾರರ ಬದಲಾಗಿ ನೇರ ನೇಮಕಾತಿ ಮೂಲಕ ಕನಿಷ್ಠ 17 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಪಯುಕ್ತವಾದ ಕಲಾಮಂದಿರ ಮತ್ತು ವಾಣಿಜ್ಯ ಮಳಿಗೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆ ಆದಾಯ ಕೂಡ ಬರಲಿದೆ. ಈ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಮಳಿಗೆಗಳನ್ನು ಹರಾಜು ಮಾಡಿ ಅದರಿಂದ ಬರುವ ಆದಾಯ ನಗರದ‌ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಸಿಎಂ ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ತಲಾ ಶೇ.50 ರಷ್ಟು ಅನುದಾನವನ್ನು ಒದಗಿಸಿವೆ. ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 150 ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇದರಲ್ಲಿ 102 ಪೂರ್ಣಗೊಂಡಿವೆ. ಬಾಕಿ ಉಳಿದ ಕೆಲ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟಾರೆ 6928 ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆಗೆ ಬಿಡುಗಡೆಯಾಗಿದ್ದು, ಇದರಲ್ಲಿ 3500 ಕೋಟಿ ರಾಜ್ಯದ ಪಾಲು ಇದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ನಿರಂತರವಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಮಾತನಾಡಿ, ಉತ್ತರ ಕರ್ನಾಟಕದಲ್ಲೆ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಇದಾಗಿದೆ. ರಾಜ್ಯದ ಎಲ್ಲೆಡೆ ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ ಸೇರಿ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಸಾರ್ವಜನಿಕರು ಈ ಸೌಲಭ್ಯಗಳ ಸದ್ಬಳಕೆ‌ ಮಾಡಿಕೊಳ್ಳಬೇಕು ಎಂದ ಅವರು, ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಪೌರಕಾರ್ಮಿಕರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕವೇ ವೇತನ ನೀಡುವುದರ ಜತೆಗೆ ಅವರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಎರಡು ದಾಖಲೆಗಳಿದ್ದರೆ ಕ್ರಯಪತ್ರ ಜತೆಗೆ ವಿದ್ಯುತ್ ಹಾಗೂ ನೀರು ಸರಬರಾಜು ಬಿಲ್ ಗಳನ್ನು ಕೂಡ ಪರಿಗಣಿಸಿ ಇ-ಖಾತೆ ಮಾಡಿಕೊಡಲು ಸರಕಾರ ನಿರ್ಧರಿಸಿದೆ. ಬೆಳಗಾವಿ ನಗರದಲ್ಲಿ 50 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತೆ ಮಾಡಿಕೊಡಲಾಗುವುದು.ತಲಾ 200 ಕೋಟಿ ರೂಪಾಯಿಯಂತೆ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಒಟ್ಟಾರೆ 200 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ ಎಂದು ಭೈರತಿ ಸುರೇಶ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ್ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬೆಳಗಾವಿಯಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಶಿಷ್ಟ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

165 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಇನ್ನೂ 17 ಎಕರೆ ಭೂಸ್ವಾಧೀನಕ್ಕೆ ಅನುಕೂಲವಾಗುವಂತೆ ಐದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಬೇಕು ಇದೇ ವೇಳೆ ಮುಖ್ಯಮಂತ್ರಿಗಳಿಗೆ ವೇದಿಕೆ ಮೇಲೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹೆಚ್ಚಿನ ಜಮೀನು‌ ಭೂಸ್ವಾಧೀನ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಹೆಚ್ಚಿನ ಪರಿಹಾರ ನೀಡಲು ಕಡತವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಅಶೋಕ ಪಟ್ಟಣ, ಆಸೀಫ್ ಸೇಠ್, ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ನಾಗರಾಜ ಯಾದವ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಸ್ಮಾರ್ಟ್ ಸಿಟಿ ಎಂಡಿ ಆಫ್ರೀನಾಬಾನು ಬಳ್ಳಾರಿ, ಪಾಲಿಕೆ ಆಯುಕ್ತೆ ಶುಭ ಬಿ‌. ಸೇರಿ ಮತ್ತಿತರರು ಇದ್ದರು

RELATED ARTICLES
- Advertisment -spot_img

Most Popular

error: Content is protected !!