Monday, December 23, 2024
Google search engine
Homeಸುದ್ದಿಜಿಲ್ಲಾ ದೌರ್ಜ್ಯನ್ಯ ತಡೆ ಹಾಗೂ ಜಾಗೃತಿ ಸಮಿತಿ ಸಭೆ- ಸ್ಮಶಾನ ಭೂಮಿ ಅಭಿವೃದ್ಧಿಗೆ ಅನುದಾನ...

ಜಿಲ್ಲಾ ದೌರ್ಜ್ಯನ್ಯ ತಡೆ ಹಾಗೂ ಜಾಗೃತಿ ಸಮಿತಿ ಸಭೆ- ಸ್ಮಶಾನ ಭೂಮಿ ಅಭಿವೃದ್ಧಿಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ:  ಜಿಲ್ಲೆಯಲ್ಲಿರುವ ಸುಮಾರು 40 ಸ್ಮಶಾನಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಳ್ಳಲು ಅನುಕೂಲವಾಗುವಂತೆ ಪ್ರತಿ ಸ್ಮಶಾನಕ್ಕೆ ತಲಾ ಐದು ಲಕ್ಷ ರೂಪಾಯಿಗಳಂತೆ ಜಿಲ್ಲೆಗೆ 2 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜ.05) ನಡೆದ ಜಿಲ್ಲಾ ದೌರ್ಜ್ಯನ್ಯ ತಡೆ ಹಾಗೂ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರದಿಂದ ಅನುದಾನ ಬಿಡುಗಡೆಗೊಂಡರೆ ಕುಡಿಯುವ ನೀರು, ತಂತಿ ಬೇಲಿ, ತಾತ್ಕಾಲಿಕ ಶೆಡ್ ನಿರ್ಮಾಣ ಮತ್ತಿತರ ಕಾಮಗಾರಿ ಕೈಗೊಳ್ಳಬಹುದು ಎಂದು ತಿಳಿಸಿದರು.

ಇದೇ ವೇಳೆ  ಸಭೆಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಮುಖಂಡರಾದ ಮಲ್ಲೇಶ್ ಚೌಗಲೆ ಸರಕಾರಿ ಯೋಜನೆಗಳಡಿ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಸುಗಮವಾಗಿ ಸಾಲ-ಸೌಲಭ್ಯಗಳನ್ನು ಒದಗಿಸಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಸೂಕ್ತ ಪರಿಶೀಲನೆ ನಡೆಸಲಾಗುವುದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಕೆಲವು ಪೊಲೀಸ್ ಅಧಿಕಾರಿಗಳು ಅಟ್ರಾಸಿಟಿ ಪ್ರಕರಣಗಳನ್ನು ಕೂಲಂಕುಶವಾಗಿ ಪರಿಶೀಲಿಸದೇ ಬಿ ರಿಪೋರ್ಟ್ ಹಾಕುವುದರಿಂದ ನೊಂದವರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಅಟ್ರಾಸಿಟಿ ಪ್ರಕರ‌ಣ ದಾಖಲಿಸುವಾಗ ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸಬೇಕು ಎಂದು ಚೌಗುಲೆ ಒತ್ತಾಯಿಸಿದರು.

ಅದೇ ರೀತಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಹಯೋಗದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿ ಮಲ್ಲೇಶ ಚೌಗಲಾ ಅವರು ಮಾಡಿಕೊಂಡರು.

ತಕ್ಷಣ ಪರಿಹಾರ ಬಿಡುಗಡೆಗೆ ಸೂಚನೆ:

ಪರಿಶಿಷ್ಟ ಜಾತಿ/ವರ್ಗದ ಜನರ ಮೇಲೆ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ನೊಂದವರಿಗೆ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲಾದ 48 ಗಂಟೆ ಮೀರಬಾರದು. ಎರಡನೇ ಕಂತಿನ ಪರಿಹಾರ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ತುರ್ತಾಗಿ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದರು.

ನಗರದ ಆರ್.ಪಿ.ಡಿ. ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರು ನಾಮಕರಣ ಮಾಡುವ ಕುರಿತು ಪಾಲಿಕೆಯ ಚುನಾಯಿತ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.

ಜಿಲ್ಲೆಯಲ್ಲಿ ಎಸ್.ಸಿ.ಪಿ- ಟಿ.ಎಸ್.ಪಿ ಬಹಳಷ್ಟು ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಈ ಕುರಿತು ಕ್ರಮ ವಹಿಸಬೇಕು. ಪ್ರತಿ ತಿಂಗಳು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಸಭೆಗಳನ್ನು ಆಯೋಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗುಳು ಸೂಚಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯ ಕರೆಪ್ಪ ಗುಡೆನ್ನವರ ಅವರು ವಿನಂತಿ ಮಾಡಿಕೊಂಡರು.

ಜಿಲ್ಲೆಯಲ್ಲಿನ ಸ್ಮಶಾನ ಭೂಮಿ ಅಭಿವೃದ್ಧಿಗೆ ಅನುದಾನ ಕೊರತೆಯಿದ್ದಲ್ಲಿ, ಅನುದಾನ ಒದಗಿಸಲು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನರು ಹೆಚ್ಚಾಗಿ ವಾಸವಿದ್ದು, ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಎಸ್.ಸಿ.ಪಿ-ಟಿ.ಎಸ್.ಪಿ ಅನುದಾನದಡಿ ತುರ್ತಾಗಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ  ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ,  ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರು ರವೀಂದ್ರ ಗಡಾದಿ, ಡಿಸಿಪಿ ರೇವಣ್ಣ ಜಗದೀಶ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!