ಬೆಳಗಾವಿ: ತಾಲೂಕಿನ ಭೂತ ರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಮಿನಿ ಪ್ರಾಣಿ ಸಂಗ್ರಹಾಲಯಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ, ಪ್ರಾಣಿಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು.ಬಳಿಕ, ಪ್ರಾಣಿಗಳ ಪಾಲನೆ- ಪೋಷಣೆ ಹಾಗೂ ಸಂಗ್ರಾಹಲಯದ ಅಭಿವೃದ್ದಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಆರಂಭವಾದಿಂದ ಇಲ್ಲಿವರೆಗೂ ಕ್ಷೇತ್ರದ ಶಾಸಕರ ಪ್ರಯತ್ನದಿಂದ ಪ್ರಾಣಿ ಸಂಗ್ರಾಹಲಯ ಬಹಳಷ್ಟು ಅಭಿವೃದ್ಧಿಯಾಗಿದೆ. ಸದ್ಯ ಕರಡಿ, ನವಿಲು, ಜಿಂಕೆ, ಆಮೆ, ಕೃಷ್ಣಮೃಗ, ಹುಲಿ, ಸಿಂಹ ಸೇರಿದಂತೆ ಕೆಲ ಪ್ರಾಣಿ-ಪಕ್ಷಿಗಳು ಇವೆ. ಇನ್ನಷ್ಟು ಪ್ರಾಣಿಗಳನ್ನು ಹೆಚ್ಚಿಸಲು ಕೇಂದ್ರ-ರಾಜ್ಯ ಸರ್ಕಾರ ಅನುಮತಿ ಪಡೆದು ಮೃಗಾಲಯ ಇನ್ನಷ್ಟೂ ಬದಲಾವಣೆ ಮಾಡಲಾಗುವುದು ಎಂದು ಭೂತರಾಮನಟ್ಟಿ ವಯಲ ಅರಣ್ಯ ಅಧಿಕಾರಿ ಪವನ ಕರನಿಂಗ ಅವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ತಿಳಿಸಿದರು.
ಸತೀಶ ಜಾರಕಿಹೊಳಿ ಅವರು ಅರಣ್ಯ ಇಲಾಖೆ ಸಚಿವರಾಗಿದ್ದಾಗ ಪ್ರಾಣಿ ಸಂಗ್ರಾಹಲಯಕ್ಕೆ ಬಹಳಷ್ಟು ಒತ್ತು ನೀಡಿದ್ದರು, ಅವರ, ಬಳಿಕ ಯಾವುದೇ ಸಚಿವರು ಇಲ್ಲಿನ ಉತ್ತೇಜನಕ್ಕೆ ಕ್ರಮ ಕೈಗೊಂಡಿಲ್ಲ. ಮತ್ತೆ ಇಲ್ಲಿನ ಅಭಿವೃದ್ದಿಗಾಗಿ ಜಿಲ್ಲಾ ಸಚಿವರು ಕ್ಯಾಂಟಿನ್ , ಊಟ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಕಾಮಗಾರಿಯೂ ಕೂಡ ಪ್ರಗತಿಯಲ್ಲಿದೆ ಎಂದು ಹೇಳಿದರು.
ವರ್ಷವೀಡಿ ಲಕ್ಷಾಂತರ ಪ್ರಾಣಿ ಪ್ರಿಯರು ಆಗಮಿಸುತ್ತಾರೆ. ಶನಿವಾರ-ಭಾನುವಾರ ಹಾಗೂ ರಜೆ ದಿನಗಳಲ್ಲಿ ದಿನಕ್ಕೆ 3 ಸಾವಿರ ಜನರು ಪ್ರಾಣಿಗಳನ್ನು ವಿಕ್ಷೀಸಲು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಇಲ್ಲಿಗೆ ಸರಾಸರಿ 2.5 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಿದ್ದು, ವೀಕ್ಷಕರಿಂದ ಲಕ್ಷಾಂತರ ಹಣ ಸಂಗ್ರಹಿಸಲಾಗುತ್ತಿದೆ. ಮಕ್ಕಳು ಸುರಕ್ಷೆತೆಗಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಪ್ರಯತ್ನ ಮಾಡಲಾಗುವುದು. ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆಯನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ, ಬೇಸಿಗೆಯ ರಜೆಗೆ ಆಗಮಿಸುವ ಪುಟ್ಟ ಮಕ್ಕಳನ್ನು ಆಕರ್ಷಿಸುವಲ್ಲಿ ವಿನೂತನ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿ, ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಅವಕಾಶ ಕಲ್ಪಿಸಿ, ಪ್ರಾಣಿ ಸಂಗ್ರಾಹಲಯ ಅಭಿವೃದ್ಧಿಯಾಗಲಿ ಅದಕ್ಕೆ ಬೇಕಾದ ಅಗತ್ಯ ಕ್ರಮಗೊಳ್ಳಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಮರು ನಿರ್ಮಾಣದಿಂದ ಪ್ರಾಣಿ ಸಂಗ್ರಾಹಲಯಕ್ಕೆ ಆಗಮಿಸಲು ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು, ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸ್ಥಳದಲ್ಲಿ ಪೋನ್ ಮೂಲಕ ಅಧಿಕಾರಿ ಎಸಿಗೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳುವಂತೆ ತಾಕೀತು ಮಾಡಿದರು.ಪ್ರಾಣಿ ಸಂಗ್ರಾಹಲಯ ಅಭಿವೃದ್ಧಿ, ಪ್ರಾಣಿಗಳ ನಿರ್ವಹಣೆ, ಪ್ರವಾಸಿಗರ ಸುಸಜ್ಜಿತವಾದ ಆಸನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಂಡು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭೂತರಾಮನಟ್ಟಿ ವಯಲ ಅರಣ್ಯ ಅಧಿಕಾರಿ ಪವನ ಕರನಿಂಗ, ಉಪವಲಯ ಅಧಿಕಾರಿ ಜಿಎಚ್ ಕುದರಿ, ಡಾ. ನಾಗೇಶ ಹೂಯಿಲಗೊಳ್ಳ, ಸಹಾಯಕ ಇಂಜಿನಿಯರಿಂಗ್ ಅಡಿವೇಪ್ಪಾ ನಾಸಿಪುಡಿ, ಮೃಗಾಲಯ ಶಿಕ್ಷಣ ಅಧಿಕಾರ ಪ್ರಜ್ವಲ ಕುಲಕರ್ಣಿ ಹಾಗೂ ಇತರರಿದ್ದರು.