ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ, ಹಣ ಮತ್ತಿತರ ವಸ್ತುಗಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಮಾ.23) ನಡೆದ ಸಹಾಯಕ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ 65 ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಲಾಗಿರುವ ತಂಡಗಳು ಸಕ್ರಿಯವಾಗಿ ಕೆಲಸ ಮಾಡಬೇಕು.
ಚುನಾವಣೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅನುಕೂಲವಾಗುವಂತೆ ಪ್ರತಿಯೊಂದು ತಂಡ ಮತ್ತು ನೋಡಲ್ ಅಧಿಕಾರಿಗಳು ತಮ್ಮ ಹೊಣೆಗಾರಿಕೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು.
ಜಿಲ್ಲೆಯ ಎಲ್ಲ ಎಫ್.ಎಸ್.ಟಿ. ತಂಡಗಳು ಚುರುಕಿನಿಂದ ಕೆಲಸ ಮಾಡಬೇಕು. ಪ್ರತಿ ತಂಡಕ್ಕೆ ನೀಡಲಾಗಿರುವ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದರಿಂದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ನಿರಂತರವಾಗಿ ತಂಡಗಳ ಮೇಲೆ ನಿಗಾ ವಹಿಸಬೇಕು ಎಂದು ನಿತೇಆ್ ಪಾಟೀಲ ಸೂಚನೆ ನೀಡಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಸಹಾಯಕ ಚುನಾವಣಾಧಿಕಾರಿಗಳಾದ ಶಕೀಲ್ ಅಹ್ಮದ್, ಸತೀಶ್ ಕುಮಾರ್, ನೋಡಲ್ ಅಧಿಕಾರಿಗಳಾದ ನಜ್ಮಾ ಪೀರಜಾದೆ, ವಿಜಯಕುಮಾರ್, ಶಿವನಗೌಡ ಪಾಟೀಲ, ಶ್ರೀಶೈಲ್ ಕಂಕಣವಾಡಿ, ನಾಗರಾಜ್, ಶ್ರೀನಿವಾಸ್, ಗುರುನಾಥ ಕಡಬೂರ, ಶಿರೀಷ್ ಕಡಗದಕೈ, ಮಹೇಶ್ ತುಬಾಕಿ ಮತ್ತಿತರರು ಉಪಸ್ಥಿತರಿದ್ದರು.
****