ಬೆಳಗಾವಿ: ರಸಗೊಬ್ಬರ ಕೊರತೆ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಗೊಬ್ಬರದ ಲಭ್ಯತೆ ಇದ್ದರೂ ಕೂಡ ಕಾಂಗ್ರೆಸ್ ಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಚಕ್ಕಡಿ, ಟ್ರಾಕ್ಟರ್ ಗಳ ಮೂಲಕ ಬಾರುಕೋಲು ಹಿಡಿದುಕೊಂಡು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, 8,73,000 ಮೆಟ್ರಿಕ್ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಕೊಟ್ಟಿದ್ದು 5,27,000 ಮೆಟ್ರಿಕ್ ಟನ್ ಮಾತ್ರ. ಎರಡೂವರೇ ಲಕ್ಷ ಮೆಟ್ರಿಕ್ ಟನ್ ಸಾವಿರಾರು ಕೋಟಿ ರೂ. ಮೌಲ್ಯದ ಗೊಬ್ಬರವನ್ನು ಮುಖ್ಯಮಂತ್ರಿ, ಕೃಷಿ ಸಚಿವರು ಮತ್ತು ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಕೃಷಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮತ್ತು ಕೃಷಿ ಅಧಿಕಾರಿಗಳಿಗೆ ನಾನು ಸವಾಲು ಹಾಕುತ್ತೇನೆ. ಸೊಸೈಟಿಯಲ್ಲಿ ವಾಸ್ತವವಾಗಿ ಗೊಬ್ಬರ ಲಭ್ಯಯಿದೆ ಎನ್ನುತ್ತಿದ್ದಾರೆ. ಆದರೆ, ಭೌತಿಕವಾಗಿ ಗೊಬ್ಬರದ ಲಭ್ಯತೆ ಇಲ್ಲ. ಯಾವ ಅಧಿಕಾರಿ, ಸಚಿವರೂ ಸೊಸೈಟಿಗೆ ಹೋಗಿ ಪರಿಶೀಲನೆ ನಡೆಸಿಲ್ಲ. ಬೇಕಾದರೆ ನಾವು ನಿಮ್ಮ ಜೊತೆಗೆ ಬರುತ್ತೇವೆ. ನಾವು ಅಂಗಡಿಗೆ ಹೋಗಿ ಪರೀಕ್ಷೆ ಮಾಡೋಣ ಎಂದ ಎ.ಎಸ್.ಪಾಟೀಲ, ಕೊಪ್ಪಳ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ನಕಲಿ ಗೊಬ್ಬರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ ಸೇರಿ ಮತ್ತಿತರರು ಇದ್ದರು.