ಬೆಳಗಾವಿ: ಸಂಪುಟ ವಿಸ್ತರಣೆಯಾದರೆ ಹೊಸ ನಾಯಕತ್ವ ಬೆಳೆಯುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿ ಸಂಪುಟ ವಿಸ್ತರಣೆಗೆ ಬೆಂಬಲ ಸೂಚಿಸಿದ್ದಾರೆ.
ಡಿಸೆಂಬರ್ ನಲ್ಲಿ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ಅವರು, ಡಿಸೆಂಬರ್ ಇನ್ನೂ ಬಹಳ ದೂರವಿದೆ. ಅದು ಆದಾಗ ನೋಡೋಣ. ಸಚಿವ ಸಂಪುಟದ ವಿಸ್ತರಣೆಯನ್ನು ಹೈಕಮಾಂಡ್ ಮಾಡಬೇಕು. ನಮಗೇನು ಅದರ ಬಗ್ಗೆ ಗೊತ್ತಿಲ್ಲ ಎಂದರು.
ಹಿರಿಯ ಶಾಸಕರು ಮಂತ್ರಿ ಆಗಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸುತ್ತಿರುವುದಕ್ಕೆ 30 ತಿಂಗಳ ನಂತರ ನಾವು ಮಂತ್ರಿಗಳು ಆಗಬೇಕೆಂದು ಬಹಳಷ್ಟು ಶಾಸಕರ ಒತ್ತಾಸೆ ಇದೆ. ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು. ಆಗ ಎಲ್ಲರಿಗೂ ಅವಕಾಶ ಸಿಗುತ್ತದೆ. ಇದನ್ನು ನಿರ್ಧಾರ ಮಾಡುವುದು ಹೈಕಮಾಂಡ್. ನಮ್ಮ ಮಟ್ಟದಲ್ಲಿ ಅದು ಇಲ್ಲ ಎಂದ ಸತೀಶ ಜಾರಕಿಹೊಳಿ, ಸಚಿವರ ಕಾರ್ಯವೈಖರಿಗಳ ಬಗ್ಗೆ ಚರ್ಚೆ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಆ ರೀತಿ ಏನೂ ಚರ್ಚೆ ಆಗಿಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಆ ವಿಚಾರ ನೀವು ಬೆಂಗಳೂರಿನಲ್ಲಿಯೇ ಕೇಳಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಎರಡು ವರ್ಷದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಿಜೆಪಿ ವಿರೋಧಿಸುತ್ತಿರುವುದಕ್ಕೆ ನಾವು ಅವರ ಸಾಧನೆ ಬಗ್ಗೆ ಹೇಳುತ್ತಿಲ್ಲ. ನಮ್ಮ ಸಾಧನೆ ಹೇಳುತ್ತಿದ್ದೇವೆ. ನಮ್ಮ ಸರ್ಕಾರ ಸಾಧನೆ ಮಾಡಿದರೆ, ಅವರಿಗೇನು ಸಮಸ್ಯೆ ಎಂದು ಸತೀಶ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು. ಇನ್ನು ಅವರೂ ಸಮಾವೇಶ ಮಾಡಲಿ. ಅವರಿಗೆ ಬೇಡ ಎಂದವರು ಯಾರು..? ಬಿಜೆಪಿ 11 ವರ್ಷದ ಸಾಧನೆ ಬಗ್ಗೆ ಹೇಳಲಿ. ನಾವು ಎರಡು ವರ್ಷದ ಸಾಧನೆ ಹೇಳುತ್ತಿದ್ದೇವೆ ಎಂದು ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.
ರೈತರ ಸಮಾಧಿ ಮೇಲೆ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ ಆರೋಪಕ್ಕೆ ಅವರು ಹಾಗೇಯೆ ಹೇಳುತ್ತಾರೆ. ಬಿಜೆಪಿ ಸರ್ಕಾರದಲ್ಲಿಯೂ ಇಂತಹ ಘಟನೆಗಳು ಆಗಿವೆ. ನಾವು ಸಾಧನೆ ಬಗ್ಗೆ ಹೇಳಲು ಹೊರಟಿದ್ದೇವೆ. ವೈಪಲ್ಯತೆ ಬಗ್ಗೆ ಅಲ್ಲ ಎಂದು ಸತೀಶ ಟಾಂಗ್ ಕೊಟ್ಟರು.
ಎರಡು ವರ್ಷಗಳ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂಬ ಚರ್ಚೆಗೆ ಬಿಜೆಪಿಯವರು ಮೊದಲ ದಿನದಿಂದ ಅದನ್ನೆ ಹೇಳುತ್ತಿದ್ದಾರೆ. ಈ ಚರ್ಚೆ ಎರಡು ವರ್ಷದಿಂದ ನಡೆಯುತ್ತಲೇ ಇದೆ. ಇನ್ನೂ ಮೂರು ವರ್ಷ ಹೀಗೆ ನಡೆಯುತ್ತದೆ ಎಂದು ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.
ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಬಿಜೆಪಿ ಆರೋಪಕ್ಕೆ ಸರ್ಕಾರ ನಡೆದಿದೆ. ಆದರೆ, ಸುಳ್ಳು ಹೇಳುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ಕುಟುಕಿದರು.
ಭಾರತೀಯ ಸೇನೆ ಯೋಧರ ಬಗ್ಗೆ ಬೇರೆ ಬೇರೆ ರಾಜ್ಯದ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗೆ ಯಾರು ಹೇಳಿದ್ದಾರೆ..? ಯಾಕೆ ಹೇಳಿದ್ದಾರೆ ಅಂತಾ ಅವರನ್ನೇ ಕೇಳಬೇಕು. ನಾವೆಲ್ಲಾ ದೇಶದ ಸೈನಿಕರ ಬಗ್ಗೆ ವಿಶ್ವಾಸವನ್ನು ಇಡಬೇಕು. ಇನ್ನು ಕೊತ್ತೂರು ಮಂಜುನಾಥ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಸರ್ಕಾರದ ಅಭಿಪ್ರಾಯವಲ್ಲ. ಆದರೆ, ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಇರಬೇಕು. ನಮ್ಮ ಪಕ್ಷ ಕೂಡ ನಮ್ಮ ಸಂದೇಶ ಕಳುಹಿಸಿದೆ. ಹಾಗಾಗಿ, ನಾವು ಕೇಂದ್ರ ಸರ್ಕಾರದ ಜತೆಗೆ ಇರುತ್ತೇವೆ ಎಂದು ಸತೀಶ ಜಾರಕಿಹೊಳಿ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಇತಿಹಾಸ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನೈಜವಾದ ಸುದ್ದಿ ಜನರಿಗ ತಿಳಿಯಬೇಕು. ಶಿವಾಜಿ ಕುರಿತು ಸರಜೂ ಕಾಟ್ಕರ್ ನೈಜ ಪುಸ್ತಕ ಬರೆದಿದ್ದಾರೆ. ಇತಿಹಾಸ ತಿರುಚುವ ಕೆಲಸವನ್ನು ಯಾರು ಮಾಡಬಾರದು. ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಶಿವಾಜಿ ಸೈನ್ಯದಲ್ಲೂ ಹಿಂದೂಗಳು, ಮುಸ್ಲಿಮರು ಇದ್ದರು. ಔರಂಗಜೇಬ್ ಸೈನ್ಯದಲ್ಲೂ ಹಿಂದೂಗಳು, ಮುಸ್ಲಿಮರು ಇದ್ದರು. ಆದರೆ, ಪ್ರಸ್ತುತ ಸಮಾಜ ಬೇರೆಯದ್ದೇ ಕಡೆಗೆ ಹೊರಟಿದೆ. ನೈಜ ಸ್ಥಿತಿಗಳು ಪುಸ್ತಕದ ಮೂಲಕ ತಿಳಿಯಬೇಕಿದೆ ಎಂದರು