ಬೆಳಗಾವಿ: ಸಿಇಟಿ ಪರೀಕ್ಷೆ ವೇಳೆ ಶಿವಮೊಗ್ಗ, ಬೀದರ, ಧಾರವಾಡ ಕೇಂದ್ರಗಳಲ್ಲಿ ಕೆಲ ಪರೀಕ್ಷಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜದ ವತಿಯಿಂದ ಬೆಳಗಾವಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಬ್ರಾಹ್ಮಣ ಸಮಾಜದವರು ಕೈಯಲ್ಲಿ ಜನಿವಾರ ಹಿಡಿದು, “ಜನಿವಾರ ಉಳಿಸಿ, ಬ್ರಾಹ್ಮಣ್ಯ ಬೆಳೆಸಿ” ಎಂಬ ಫಲಕ ಹಿಡಿದು ಪ್ರತಿಭಟಿಸಿದರು. ಪ್ರತಿಭಟನಾನಿರತ ಓರ್ವ ವ್ಯಕ್ತಿ ರಸ್ತೆ ಮೇಲೆ ಹೊರಳಾಡಿದರು. ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದರು. ಹಿಂದೂ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬ್ರಾಹ್ಮಣ ಸಮಾಜ ಜನಿವಾರ ತೆಗೆಸಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಪ್ರತಿಭಟನೆಗೆ ಶಾಸಕ ಅಭಯ್ ಪಾಟೀಲ ಸಾಥ್: ಬ್ರಾಹ್ಮಣ ಸಮಾಜದ ಪ್ರತಿಭಟನೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಅವರವರ ಧಾರ್ಮಿಕ ಆಚರಣೆಗಳು ಇರುತ್ತವೆ. ಜನಿವಾರ ತೆಗೆಸುವುದಷ್ಟೇ ಅಲ್ಲದೇ ಅದನ್ನು ಕತ್ತರಿಸಿದ್ದಾರೆ. ಅವರಿಗೆ ಎಷ್ಟು ಧೈರ್ಯ ಇರಬೇಕು. ಅವರ ಕೈ ಕತ್ತರಿಸಿದರೆ ನಡೆಯುತ್ತಾ..? ಹಾಗಾಗಿ, ಈ ಘಟನೆ ನಾನು ಖಂಡಿಸುತ್ತೇನೆ. ಬೇರೆ ಸಮಾಜ ಆಗಿದ್ದರೆ ಅದನ್ನೆ ಹೇಳುತ್ತಿದ್ದರು. ಆದರೆ, ಬ್ರಾಹ್ಮಣರು ಶಾಂತಿ ಪ್ರಿಯರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಶಿಕ್ಷಕರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ರೀತಿ ಕ್ರಮ ಆಗದಿದ್ದರೆ ಇದರ ಹಿಂದೆ ಸರ್ಕಾರ ಇದೆ ಎನ್ನಬೇಕಾಗುತ್ತದೆ. ನಿಮಗೆ ಹಿಜಾಬ್ ನೆನಪಾಗುತ್ತದೆ. ಈಗ ಜನಿವಾರ ನೆನಪಾಗುತ್ತಿಲ್ಲವೇ ಎಂದು ಅಭಯ್ ಪಾಟೀಲ ಪ್ರಶ್ನಿಸಿದರು.
ಮುಖಂಡ ಅನಿಲ್ ಪೋತದಾರ್ ಮಾತನಾಡಿ, ನಾವು ಶಾಂತಿ ಪ್ರಿಯರು ದೇಶಕ್ಕೆ ಒಳ್ಳೆಯದನ್ನೆ ಮಾಡುತ್ತಾ ಬಂದಿದ್ದೇವೆ. ಯಾರ ಆದೇಶದಂತೆ ಜನಿವಾರ ಕತ್ತರಿಸಿದ್ದಾರೆ ಮತ್ತು ಇದು ಯಾವ ಕಾಯ್ದೆಯಲ್ಲಿದೆ. ಬೇರೆ ಜಾತಿಗೆ ಈ ಅಪಮಾನ ಆಗಿದ್ದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿತ್ತು. ಆದರೆ, ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ನಿಮಗೆ ಜನಿವಾರದ ಬಗ್ಗೆ ಆಕ್ಷೇಪ ಇದ್ದರೆ ಮುಂದಿನ ಸಲ ತಲವಾರ ಹಿಡಿದುಕೊಂಡು ಬರುತ್ತೇವೆ. ನಮ್ಮಲ್ಲಿ ಪರಶುರಾಮನ ಇತಿಹಾಸವಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣಮಠದ ಹೊನ್ನಿದಿಬ್ಬ ಆಚಾರ್ಯ, ಸಮೀರ ಆಚಾರ್ಯ, ಗುರುರಾಜ್ ಆಚಾರ್ಯ ಮುತಾಲಿಕ್ ದೇಸಾಯಿ, ಜಯತೀರ್ಥ ಸವದತ್ತಿ, ಡಾ.ಕೆ.ಡಿ.ದೇಶಪಾಂಡೆ, ಅಶೋಕ ದೇಶಪಾಂಡೆ ಸೇರಿ ಮತ್ತಿತರರು ಇದ್ದರು.