Glenn Maxwell – Virat Kohli: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಕುಚುಕು ಗೆಳೆಯರೇನು ನಿಜ. ಆದರೆ ಅದು ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ಬಳಿಕವಷ್ಟೇ. ಅದಕ್ಕೂ ಮುನ್ನ ಇಬ್ಬರ ನಡುವೆ ಸ್ನೇಹವಿರಲಿಲ್ಲ. ಇದನ್ನು ಖುದ್ದು ಮ್ಯಾಕ್ಸ್ವೆಲ್ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತುಂಬಾ ಆತ್ಮೀಯರು ಎಂಬುದು ಗೊತ್ತೇ ಇದೆ. ಅದರಲ್ಲೂ ಆರ್ಸಿಬಿ ತಂಡದಲ್ಲಿ ಇಬ್ಬರು ಕುಚುಕುಗಳಾಗಿ ಕಾಣಿಸಿಕೊಂಡಿದ್ದರು. ಆದರೆ ಇದಕ್ಕೂ ಮುನ್ನ ಕಿಂಗ್ ಕೊಹ್ಲಿ ಹಾಗೂ ಮ್ಯಾಕ್ಸಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ವಿಚಾರವೊಂದು ಇದೀಗ ಬಹಿರಂಗವಾಗಿದೆ.
2017ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿಯು ಭುಜದ ನೋವಿಗೆ ಒಳಗಾಗಿದ್ದರು. ಈ ನೋವನ್ನು ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅಪಹಾಸ್ಯ ಮಾಡಿದ್ದರು. ಈ ಹೀಯಾಳಿಕೆಯಿಂದ ಮನ ನೊಂದಿದ್ದ ಕೊಹ್ಲಿ ಮ್ಯಾಕ್ಸ್ವೆಲ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಬ್ಲಾಕ್ ಮಾಡಿದ್ದರು.ಆದರೆ ಈ ವಿಚಾರ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಗೊತ್ತೇ ಇರಲಿಲ್ಲ. 2022 ರಲ್ಲಿ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಮ್ಯಾಕ್ಸ್ವೆಲ್ ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿಯನ್ನು ಫಾಲೋ ಮಾಡಿ ಹುಡುಕಾಡಿದ್ದಾರೆ. ಆದರೆ ಎಲ್ಲೂ ಸಹ ಕೊಹ್ಲಿಯ ಅಕೌಂಟ್ ಕಾಣಿಸಿರಲಿಲ್ಲ.
ಈ ಬಗ್ಗೆ ಗ್ಲೆನ್ ಮ್ಯಾಕ್ಸ್ವೆಲ್ ವಿರಾಟ್ ಕೊಹ್ಲಿಯನ್ನು ವಿಚಾರಿಸಿದ್ದಾರೆ. ಅಲ್ಲದೆ ನಿಮ್ಮ ಅಕೌಂಟ್ ಕಾಣಿಸುತ್ತಿಲ್ಲ…ನೀವೇನಾದರೂ ಬ್ಲಾಕ್ ಮಾಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ ಹೌದು ಎಂಬ ಉತ್ತರ ನೀಡಿದ್ದಾರೆ. ಯಾಕೆಂದು ಪ್ರಶ್ನಿಸಿದಾಗ ಐದು ವರ್ಷಗಳ ಹಳೆಯ ಕಥೆ ಹೇಳಿದ್ದಾರೆ.
2017 ರಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯದ ವೇಳೆ ನೀನು ನನ್ನನ್ನು ಅಪಹಾಸ್ಯ ಮಾಡಿದ್ದರಿಂದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಲಾಕ್ ಮಾಡಿರುವುದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ಇದೀಗ ಗ್ಲೆನ್ ಮ್ಯಾಕ್ಸ್ವೆಲ್ LiSTNR ಸ್ಪೋರ್ಟ್ ವಿಲೋ ಟಾಕ್ ಪಾಡ್‌ಕ್ಯಾಸ್ಟ್ನಲ್ಲಿ ಬಹಿರಂಗಪಡಿಸಿದ್ದಾರೆ.
ಇದಾದ ಬಳಿಕ ನಾವು ಅತ್ಯುತ್ತಮ ಸ್ನೇಹಿತರಾಗಿದ್ದೇವೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನನ್ನು ಸ್ವಾಗತಿಸಿದ ಮೊದಲ ವ್ಯಕ್ತಿ ಕೂಡ ವಿರಾಟ್ ಕೊಹ್ಲಿ. ಹೀಗಾಗಿಯೇ ಈಗ ನಾವಿಬ್ಬರು ಗುಡ್ ಫ್ರೆಂಡ್ಸ್ ಆಗಿದ್ದೇವೆ ಎಂದು ಗ್ಲೆನ್ ಮ್ಯಾಕ್ಸ್ವೆಲ್ ತಿಳಿಸಿದ್ದಾರೆ