ಗದಗ: ಶಾಸ್ತಿಯ ಸಂಗೀತದ ರಸದೌತಣ “ಗಾನಯೋಗಿ ಸ್ವರ ಉತ್ಸವ-2024” ರಾಷ್ಟ್ರೀಯ ಸಂಗೀತೋತ್ಸವವನ್ನು ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಗಾನಯೋಗಿ ಸ್ವರ ಉತ್ಸವವನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೂಜ್ಯರಾಜ ಕಲ್ಲಯ್ಯಜ್ಜನವರು ಕುಮಾರ ಶಿವಯೋಗಿ, ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ದೇಶಕಂಡ ಶ್ರೇಷ್ಠ ಗಾಯಕರು, ವಾದಕರು ಗಾನಯೋಗಿ ಸ್ವರ ಉತ್ಸವದಲ್ಲಿ ಪಾಲ್ಗೊಂಡು ಸಂಗೀತ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುತ್ತಿರುವುದು ಅಭಿನಂದನೀಯವಾದುದು. ಪಂ.ಸೋಮನಾಥ ಮರಡೂರ ಅವರು 80 ವಸಂತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದರು. ಪಂ.ಸೋಮನಾಥ ಮರಡೂರ ಅವರ ಕಲ್ಪನೆಯಂತೆ ಧಾರವಾಡದ ನೆಲದಲ್ಲಿ ಪಂ.ಪಚಾಕ್ಷರ ಗವಾಯಿಗಳ ಮತ್ತು ಪಂ.ಪುಟ್ಟರಾಜ ಗವಾಯಿಗಳ ಸ್ಮರಣೆಯಲ್ಲಿ ದೀನ-ದಲಿತ, ಬಡ ಮಕ್ಕಳ ಸಂಗೀತ ಕಲಿಕೆಗಾಗಿ “ಸಂಗೀತ ಗ್ರಾಮ” ನಿರ್ಮಾಣ ಮಾಡುವ ಸಂಕಲ್ಪ ಇಡೇರಿಸುವಲ್ಲಿ 2 ಎಕರೆ ಜಮೀನನ್ನು ಸರಕಾರದಿಂದ ಒದಗಿಸಿ, ಆಶ್ರಮ ನಿರ್ಮಾಣ ಮಾಡಲು ಇಲ್ಲಿನ ರಾಜಕಾರಣಿಗಳು ಇಚ್ಛಾಸಕ್ತಿ ವಹಿಸಬೇಕೆಂದು ಆಗ್ರಹಿಸಿದರು.
ಪದ್ಮಶ್ರೀ ಪಂ.ಎಮ್.ವೆಂಕಟೇಶ ಕುಮಾರ ಅವರು ಮಾತನಾಡುತ್ತ ಇಂಥಹ ವಿಶಿಷ್ಟ ಹಿಂದೂಸ್ಥಾನಿ ಕಾರ್ಯಕ್ರಮಕ್ಕೆ ಆಯೋಜಿಸುವುದು ಬಹಳ ಕಷ್ಟದ ಕೆಲಸ, ಅದಕ್ಕೆ ಎಲ್ಲರ ನೆರವು-ಸಹಕಾರ ಅಗತ್ಯವಿದೆ. ಆಗ ಮಾತ್ರ ಕಲೆ, ಪರಂಪರೆ ಉಳಿಯಲು ಸಾಧ್ಯ ಎಂದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ಉದಯಕುಮಾರ ದೇಸಾಯಿ, ಡಾ.ಎಸ್.ಪಿ.ಬಳಿಗಾರ, ಡಾ.ಶಶಿಧರ ನರೇಂದ್ರ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಗ್ರಾಮೀಣ ಅವಾರ್ಡ ಪುರಸ್ಕೃತ, ಮುಂಬಯಿಯ ಪಂ.ರಾಕೇಶ್ ಚೌರಾಸಿಯಾ ಅವರ ಕೊಳಲು ವಾದನ, ಪದ್ಮಶ್ರೀ ಪಂ.ವಿಜಯ ಘಾಟೆಯವರ ತಾಲದಿಂಡಿ ವಿಶೇಷ ಕಾರ್ಯಕ್ರಮ, ಮೈಸೂರು ಬ್ರರ‍್ಸ್ ವಿದ್ವಾನ್ ನಾಗರಾಜ, ವಿದ್ವಾನ್ ಡಾ.ಮಂಜುನಾಥ ಅವರ ಕರ್ನಾಟಕಿ ಶೈಲಿಯ ದ್ವಂದ್ವ ಪಿಟಿಲು ವಾದನ, ಪದ್ಮಶ್ರೀ ಪಂ.ಎಮ್.ವೆಂಕಟೇಶ ಕುಮಾರ, ಬೆಂಗಳೂರಿನ ಪಂ.ವಿನಾಯಕ ತೊರವಿ, ಧಾರವಾಡದ ಪಂ.ಸೋಮನಾಥ ಮರಡೂರ, ಉಸ್ತಾದ್ ಫಯಾಜಖಾನ್, ಡಾ.ಮೃತ್ಯುಂಜಯ ಅಗಡಿ, ಸದಾಶಿವ ಐಹೊಳೆ, ಕಲಬುರಗಿಯ ಡಾ.ಜಯದೇವಿ ಜಂಗಮಶೆಟ್ಟಿ, ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು, ದೆಹಲಿಯ ಡಾ.ಅವಿನಾಶಕುಮಾರ, ಹುಬ್ಬಳ್ಳಿ ಕೃಷ್ಣೇಂದ್ರ ವಾಡೇಕರ ಅವರ ಗಾಯನ, ಉಸ್ತಾದ್ ಶಫೀಕ್‌ಖಾನ್ ಅವರ ಸಿತಾರ ವಾದನ ಹಾಗೂ ಡಾ.ರವಿಕಿರಣ ನಾಕೋಡ ಅವರ ತಬಲಾ ಸೋಲೋ ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ ಪಂ.ರಘುನಾಥ ನಾಕೋಡ, ಬೆಂಗಳೂರಿನ ಪಂ.ರವೀಂದ್ರ ಯಾವಗಲ್, ಪಂ.ರಾಜೇಂದ್ರ ನಾಕೋಡ, ಬೆಳಗಾವಿಯ ಡಾ.ಸುಧಾಂಶು ಕುಲಕರ್ಣಿ, ಉಸ್ತಾದ ನಿಸಾರ ಅಹಮದ್, ಗುರುಪ್ರಸಾದ ಹೆಗಡೆ, ಡಾ.ಉದಯ ಕುಲಕರ್ಣಿ, ಸತೀಶ ಕೊಳ್ಳಿ, ಸತೀಶ ಭಟ್ಟ ಹೆಗ್ಗಾರ, ಡಾ.ಶ್ರೀಹರಿ ದಿಗ್ಗಾಂವಿ, ಬಸವರಾಜ ಹಿರೇಮಠ, ಪ್ರಸಾದ ಮಡಿವಾಳರ ಸಾಥ್ ಸಂಗತ ನೀಡಿದರು.
ಆರತಿ ದೇವಶಿಖಾಮನಿ ಮತ್ತು ರವಿ ಕುಲಕರ್ಣಿ ನಿರೂಪಿಸಿದರು. ಕುಮಾರ ಮರಡೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.