ಬೆಳಗಾವಿ : ಕರ್ನಾಟಕ ಕಾನೂನು ಮತ್ತು ಸಂಸಧೀಯ ಸುಧಾರಣಾ ಸಂಸ್ಥೆ, ಬೆಂಗಳೂರು ಆಯೋಜಿಸಿದ್ದ ರಾಜ್ಯ ಮಟ್ಟದ ಕಾನೂನು ವಿದ್ಯಾರ್ಥಿಗಳ ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ 2023-24 ರಲ್ಲಿ ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಕಾಲೇಜಿನ ವಿದ್ಯಾರ್ಥಿ ತಿರುಮಲ ನಾಯ್ಕ ಪ್ರಥಮ ಸ್ಥಾನ ಪಡೆದು ಬೀಗಿದ್ದಾರೆ.
ವಿಕಾಸ ಸೌಧ ಬೆಂಗಳೂರು ಕೊಠಡಿ ಸಂಖ್ಯೆ 419 ರಲ್ಲಿ ನಡೆದ ಕಾನೂನು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯಲ್ಲಿ ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಬಿ.ವಿ. ಬೆಲ್ಲದ ಲಾ ಕಾಲೇಜಿನ ವಿದ್ಯಾರ್ಥಿ ತಿರುಮಲ ನಾಯ್ಕ ಮೊದಲ ಸ್ಥಾನ ಪಡೆದು ಕೆಎಲ್ ಇ ಸಂಸ್ಥೆ ಮತ್ತು ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಬಿ. ಜಯಸಿಂಹ ತಿಳಿಸಿದರು.
ರಾಜ್ಯದ ಐದು ವಲಯಗಳಲ್ಲಿ ನಡೆದ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಒಟ್ಟು 50 ಜನ ಕಾನೂನು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯನ್ನು ದಿನಾಂಕ 05/04/2024 ರಂದು ವಿಕಾಸ ಸೌಧದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿಯ ವಿದ್ಯಾರ್ಥಿ ತಿರುಮಲ ನಾಯ್ಕ “ವಿಧಾನಸಭಾ ಸಭಾಧ್ಯಕ್ಷ” ರಾಗಿ ಆಯ್ಕೆಯಾಗಿ ಪೂರ್ತಿ ಅಧಿವೇಶನವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಕೆಳಮನೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಕಾನೂನು ವಿದ್ಯಾರ್ಥಿಗಳು ರಾಜಕೀಯಕ್ಕೆ ಬರಬೇಕೆಂಬ ಆಶಯ ವ್ಯಕ್ತ ಪಡಿಸಿದರು.
ನಂತರ ಮಾತನಾಡಿದ ಮೇಲ್ಮನೆಯ ಸಭಾಪತಿ ಬಸವರಾಜ ಹೊರಟ್ಟಿಯವರು, ವಿದ್ಯಾರ್ಥಿಗಳು ದೇಶದ ಪ್ರಜಾಪ್ರಭುತ್ವದ ಆಸ್ತಿ ಎಂದು ಹೇಳಿದರು.
ಸ್ಪರ್ಧೆಯ ವಿಜೇತರಿಗೆ ಯು.ಟಿ. ಖಾದರ್ ಮತ್ತು ಬಸವರಾಜ ಹೊರಟ್ಟಿಯವರು ಬಹುಮಾನ ವಿತರಿಸಿದರು. ಬೆಳಗಾವಿ ಬಿ.ವಿ. ಬೆಲ್ಲದ ಲಾ ಕಾಲೇಜಿನ ವಿದ್ಯಾರ್ಥಿ ತಿರುಮಲ ಭಟ್ಕಳ ಮೊದಲ ಸ್ಥಾನ ಪಡೆದು ಪಾರಿತೋಷಕ ಜೊತೆಗೆ 10,000/- ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದ ಸಂಯೋಜಕರಾದ ಕರ್ನಾಟಕ ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಡಾ.ಕೆ.ದ್ವಾರಕನಾಥ ಬಾಬು ಮತ್ತು ಅವರ ಎಲ್ಲಾ ಸಿಬ್ಬಂದಿ ವರ್ಗ ಗೆದ್ದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಬಿ.ವಿ.ಬೆಲ್ಲದ ಕಾನೂನು ಕಾಲೇಜಿನ ಪ್ರಾಂಶುಪಾಲರು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವಿದ್ಯಾರ್ಥಿ ತಿರುಮಲ ನಾಯ್ಕ ಇವರ ಸಾಧನೆಗೆ ಅಭಿಮಾನ ವ್ಯಕ್ತಪಡಿಸಿದರು.
ಭಟ್ಕಳದ ತೆಂಗಿನಗುಂಡಿಯ ನಿವಾಸಿಯಾಗಿರುವ ತಿರುಮಲ ನಾಯ್ಕ ತಮ್ಮ ವಾಕ್ಚಾತುರ್ಯ ಮತ್ತು ಬರವಣಿಗೆಯ ಮುಖಾಂತರ ತಿರುಮಲ ಭಟ್ಕಳ ಎಂದೇ ಖ್ಯಾತರು. ತಮ್ಮ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ಮುರ್ಡೇಶ್ವರದಲ್ಲಿ ಮುಗಿಸಿ ಬೆಳಗಾವಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಇವರು ಕಾನೂನನ್ನು ಅಭ್ಯಾಸಿಸುವ ಆಸಕ್ತಿಯಿಂದ ಬೆಳಗಾವಿಯ ಕೆ. ಎಲ್.ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಲ್ಲಿ ಕಾನೂನು ವಿಧ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.
ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಬಾರಿಯೂ ರಾಜ್ಯಮಟ್ಟದ ಮಾದರಿ ವಿಧಾನಸಭಾ ಅಧಿವೇಶನವನ್ನು ಸಭಾಧ್ಯಕ್ಷರಾಗಿ ಅಚ್ಚುಕಟ್ಟಾಗಿ ನಿರ್ವಹಿಸಿ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ.