ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಸೋಲು-ಗೆಲುವಿಗಿಂತಲೂ ಮುಖ್ಯವಾಗಿ ನಮ್ಮ ಪಕ್ಷದ ಶಾಸಕರ ನಿಷ್ಠೆ ಮತ್ತು ಪ್ರಾಮಾಣಿಕತೆಯ ಸಾಬೀತಿಗಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾಗಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿಂದು ರಾಜ್ಯಸಭೆ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ ಆರಂಭದಲ್ಲೇ ಜೆಡಿಎಸ್‍ನಿಂದ 12 ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಮಾಡುತ್ತಿದ್ದರು.
ಇಲ್ಲಿ ಸೋಲು-ಗೆಲುವಿನ ಪ್ರಶ್ನೆಯಿಲ್ಲ. ಬಿಜೆಪಿ-ಜೆಡಿಎಸ್‍ನ ಮೈತ್ರಿಯ ಬಳಿಕ ಇದು ಎರಡನೇ ಸೋಲು ಎಂಬ ವ್ಯಾಖ್ಯಾನವೂ ಸರಿ ಇಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬೇರೆ ರೀತಿಯ ಕಾರಣಗಳಿವೆ. ಬೆಳ್ಳಿ ಬಟ್ಟಲು ಹಂಚಿದ್ದಾರೆ. ಜೊತೆಗೆ ಶಿಕ್ಷಕರ ಕ್ಷೇತ್ರದ ಮತದಾರರಲ್ಲಿ ಅನುದಾನಿತ ಶಾಲೆಗಳ ಪ್ರಮಾಣ ಹೆಚ್ಚಿತ್ತು. ಅವರನ್ನು ಹೆದರಿಸಿ ಬ್ಲಾಕ್‍ಮೇಲ್ ಮಾಡುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದರು.