ಅಮರಾವತಿ : ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು 118 ಸೀಟುಗಳಿಗೆ ಮೊದಲ ಜಂಟಿ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ.
ಆದರೆ, ಈ ಮೈತ್ರಿಕೂಟವನ್ನು ಬಿಜೆಪಿ ಸೇರಿಕೊಳ್ಳಲು ಬಯಸಿದರೆ, ಅದಕ್ಕೆ ಅವಕಾಶ ನೀಡುವ ಅಗತ್ಯವನ್ನು ಗಮನದಲ್ಲಿ ಇರಿಸಿಕೊಂಡು ಸೀಟು ಹಂಚಿಕೆ ಮಾಡಲಾಗಿದೆ ಎಂದು ಇಬ್ಬರೂ ನಾಯಕರು ತಿಳಿಸಿದ್ದಾರೆ.
ಮತ್ತೆ NDA ತೆಕ್ಕೆಗೆ TDP? ದಿಲ್ಲಿಯಲ್ಲಿ ಅಮಿತ್ ಶಾ ಜೊತೆ ಚಂದ್ರಬಾಬು ನಾಯ್ಡು ದೋಸ್ತಿ ಮಾತು ಮೊದಲ ಪಟ್ಟಿಯ ಪ್ರಕಾರ, ಟಿಡಿಪಿ 94 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜನಸೇನಾ ಪಕ್ಷಕ್ಕೆ 24 ಕ್ಷೇತ್ರಗಳನ್ನು ನೀಡಲಾಗಿದೆ.
“ಈ ಶುಭ ಸಂದರ್ಭದಲ್ಲಿ ಟಿಡಿಪಿ ಮತ್ತು ಜನಸೇನಾ ಎರಡೂ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿವೆ. ಇದು ರಾಜ್ಯದಲ್ಲಿನ ಪ್ರತಿಯೊಬ್ಬರಿಗೂ ಶುಭ ಸಮಾಚಾರವಾಗಲಿದೆ ಎಂದು ಆಶಿಸುತ್ತೇನೆ. ಈ ಒಕ್ಕೂಟವು ರಾಜ್ಯದ ಭವಿಷ್ಯವಾಗಿದೆ. ಮಹಾನ್ ಪ್ರಯತ್ನಕ್ಕೆ ಇದು ಮೊದಲ ಹೆಜ್ಜೆಯಾಗಿದೆ” ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಉಂಡವಲ್ಲಿಯಲ್ಲಿನ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
“ನಾವು ಮೊದಲು ರಾಜ್ಯವನ್ನು ಸರಿಯಾದ ದಾರಿಗೆ ತರಬೇಕಿದೆ. ವೈಯಕ್ತಿಕ ಮತ್ತು ಪಕ್ಷದ ಉದ್ದೇಶಕ್ಕಿಂತಲೂ ರಾಜ್ಯದ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ” ಎಂದು ಹೇಳಿದರು. ಮೈತ್ರಿಕೂಟದಲ್ಲಿ ಜನಸೇನಾಕ್ಕೆ ಮೂರು ಲೋಕಸಭೆ ಕ್ಷೇತ್ರಗಳನ್ನು ನೀಡಲಾಗಿದೆ. ಇದು ಪಕ್ಷವು 40 ಸೀಟುಗಳಲ್ಲಿ ಸ್ಪರ್ಧಿಸುವುದಕ್ಕೆ ಸಮ ಎಂದರು.
ಜನಸೇನಾಕ್ಕೆ ಕೇವಲ 24 ಸೀಟುಗಳನ್ನು ನೀಡಿರುವುದ ಹಿಂದಿನ ಲೆಕ್ಕಾಚಾರವನ್ನು ವಿವರಿಸಿದ ಪವನ್ ಕಲ್ಯಾಣ್, ದೊಡ್ಡ ಸಂಖ್ಯೆಯ ಸೀಟುಗಳಲ್ಲಿ ಪ್ರಯೋಗ ಮಾಡುವುದಕ್ಕಿಂತ ಕಡಿಮೆ ಸಂಖ್ಯೆಯ ಸೀಟುಗಳನ್ನು ಪಡೆಯುವುದು ಮುಖ್ಯ ಎಂದರು.
24 ಸೀಟು ಮಾತ್ರ ಏಕೆ?
ಜನಸೇನಾ ಪಕ್ಷದಿಂದ ಕಣಕ್ಕಿಳಿಯಲಿರುವ ಐವರು ಅಭ್ಯರ್ಥಿಗಳ ಹೆಸರನ್ನು ಪವನ್ ಕಲ್ಯಾಣ್ ಪ್ರಕಟಿಸಿದರು. ಉಳಿದ 19 ಅಭ್ಯರ್ಥಿಗಳ ಹೆಸರನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.
ಬಿಜೆಪಿ ಕೂಡ ಮೈತ್ರಿಕೂಟದ ಒಳಗೆ ಸೇರಿಕೊಂಡರೆ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ಅಂಶಗಳನ್ನು ಚರ್ಚಿಸಲಾಗುವುದು ಎಂದು ನಾಯ್ಡು ತಿಳಿಸಿದರು.
“ಈ ಮೈತ್ರಿಕೂಟವು ರಾಜ್ಯದ ಭವಿಷ್ಯಕ್ಕಾಗಿ. ಇದು ಯಾವುದೇ ಇಬ್ಬರು ವ್ಯಕ್ತಿಗಳು ಅಥವಾ ಎರಡು ಪಕ್ಷಗಳಿಗಲ್ಲ. ಎರಡೂ ಪಕ್ಷಗಳು ಐದು ಕೋಟಿ ಜನರ ಕಲ್ಯಾಣಕ್ಕಾಗಿ ಜತೆಗೂಡಿ ಕೆಲಸ ಮಾಡಲು ಈ ನಿರ್ಧಾರ ಕೈಗೊಂಡಿವೆ. ಇದು ರಾಜ್ಯಕ್ಕೆ ಐತಿಹಾಸಿಕ ದಿನ” ಎಂದು ಹೇಳಿದರು.
ನಾಯ್ಡು ಅವರು ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದರೆ, ಅವರ ಮಗ ನಾರಾ ಲೋಕೇಶ್ ಮಂಗಳಗಿರಿಯಿಂದ ಕಣಕ್ಕಿಳಿಯಲಿದ್ದಾರೆ. ನಾಯ್ಡು ಅವರ ಟಿಡಿಪಿ ಪಕ್ಷದಿಂದ ಘೋಷಣೆಯಾಗಿರುವ 94 ಅಭ್ಯರ್ಥಿಗಳ ಪೈಕಿ 23 ಮಂದಿ ಹೊಸಬರಾಗಿದ್ದಾರೆ. ಮೂವರು ವೈದ್ಯರು, ಒಬ್ಬ ನಿವೃತ್ತ ಐಎಎಸ್ ಅಧಿಕಾರಿ, 25 ಸ್ನಾತಕೋತ್ತರ ಪದವೀಧರರು, 51 ಪದವೀಧರರು ಮತ್ತು ಮೂವರು ಡಾಕ್ಟರೇಟ್ ಪಡೆದವರು ಇದ್ದಾರೆ” ಎಂದು ತಿಳಿಸಿದರು.