Wednesday, October 15, 2025
Google search engine
Homeಜಿಲ್ಲಾವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
spot_img

ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೂಲಿಕಟ್ಟಿ ಗ್ರಾಮದಲ್ಲಿ ವಿಷನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಸರ್ಕಾರಿ ಶಾಲೆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯಲ್ಲಿ ಯಾವುದೆ ಪ್ರಾಣಹಾನಿ ಆಗಿರಲಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿದ ಸವದತ್ತಿ ಪೊಲೀಸರು ಆರೋಪಿಗಳ ಕೃತ್ಯ ಬಯಲಿಗೆ ತಂದಿದ್ದಾರೆ.

ಶಾಲೆ ಮುಖ್ಯ ಶಿಕ್ಷಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಮುಖ್ಯ ಶಿಕ್ಷಕನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಕೃತ್ಯ ಎಸಗಿದ್ದಾರೆ. ವಿಷ ಮಿಶ್ರಿತ ನೀರು ‌ಸೇವಿಸಿ ಮಕ್ಕಳು ಮೃತಪಟ್ಟರೆ ಅದಕ್ಕೆ ಮುಖ್ಯ ಶಿಕ್ಷಕ ಹೊಣೆ ಆಗಿ ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂದು ಹೂಲಿಕಟ್ಟಿ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲ ಸಂಚು ರೂಪಿಸಿದ್ದರು ಎಂದು ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಆರೋಪಿ ಸಾಗರ ಪಾಟೀಲ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ. ವಿಷ ಬೆರಿಸಲು ಕೃಷ್ಣಾ ಮಾದರ ಎಂಬಾತನಿಗೆ ಹೇಳಿದ್ದರು. ಕೃಷ್ಣಾ ಅನ್ಯಜಾತಿ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ ಆರೋಪಿಗಳು ನಾನು ಹೇಳುವ ಕೆಲಸ ಮಾಡದಿದ್ದರೆ ನಿನ್ನ ಪ್ರೀತಿಯ ವಿಷಯ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದರು.

ಇದರಿಂದ ಹೆದರಿ ನೀರಿನಲ್ಲಿ ವಿಷ ಬೆರೆಸಲು ಕೃಷ್ಣಾ ಒಪ್ಪಿಕೊಂಡಿದ್ದ.‌ ಆಗ ಸಾಗರ ಸಂಬಂಧಿ ನಾಗನಗೌಡ ಜೊತೆಗೆ ಮುನವಳ್ಳಿಗೆ ಹೋಗಿ ಕೀಟನಾಶಕ ತೆಗೆದುಕೊಂಡು ಬಂದಿದ್ದರು. ಬಳಿಕ ಕೃತ್ಯಕ್ಕೆ ಅದೇ ಶಾಲೆಯ ಅಮಾಯಕ ಬಾಲಕನಿಗೆ ಚಾಕೊಲೇಟ್, ಕುರುಕುರಿ ಮತ್ತು 500 ರೂ. ಹಣ ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು. ಅವರ ಆಮಿಷಕ್ಕೆ ಒಳಗಾಗಿದ್ದ ಬಾಲಕ ಶಾಲಾ ಆವರಣದಲ್ಲಿದ್ದ ಟ್ಯಾಂಕರ್‌ನಲ್ಲಿ ವಿಷ ಬೆರೆಸಿ ಬಾಟಲಿ ಅಲ್ಲೇ ಎಸೆದಿರುವುದು ಬೆಳಕಿಗೆ ಬಂದಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಾ.ಭೀಮಾಶಂಕರ ತಿಳಿಸಿದರು.

RELATED ARTICLES
- Advertisment -spot_img

Most Popular

error: Content is protected !!