ಬೆಳಗಾವಿ 26: ಎಲ್ಲಾ ಸೇವೆಯಲ್ಲಿ ಶ್ರೇಷ್ಠ ಸೇವೆ ಎಂದರೆ ಅದು ದೇಶ ಸೇವೆ. ದೇಶದ ಗಡಿಯಲ್ಲಿ ನಿಂತು ಮಳೆ, ಚಳಿ ಅನ್ನದೇ ಎದುರಾಳಿ ವಿರುದ್ಧ ಹೋರಾಡುವ ಸೈನಿಕರ ಸೇವೆಗೆ ಬೆಲೆ ಕಟ್ಟೊದಕ್ಕೆ ಆಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದ ಕೆ.ಪಿ.ಟಿ.ಸಿ.ಎಲ್ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಇವರ ಆಶ್ರಯದಲ್ಲಿ ಶನಿವಾರ ನಡೆದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸೈನಿಕರು ಇರುವುದರಿಂದ ದೇಶ ಸುರಕ್ಷಿತವಾಗಿದೆ, ಸೈನಿಕರಂತೆ ನಾವು ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.
ದೇಶ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಸೇವೆಯಿಂದ ನಿವೃತ್ತರಾದರೂ ಅವರ ಉತ್ಸಾಹ ಮಾತ್ರ ಕುಂದಿಲ್ಲ. ದೇಶದ ಗಡಿಯಲ್ಲಿ ನಿಂತು ವೈರಿಗಳ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರ ಯೋಧರ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂದರು.
ಕಾರ್ಗಿಲ್ ಯುದ್ಧವನ್ನು ಗೆದ್ದಿದ್ದೇವೆ, ಇತ್ತೀಚೆಗೆ ಅಪರೇಷನ್ ಸಿಂಧೂರು ಮೂಲಕ ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದೇವೆ. ಇದಕ್ಕೆ ಭಾರತದ ದೇಶ ಹೆಚ್ಚು ವೀರರನ್ನು ಹೊಂದಿರುವುದೇ ಸಾಕ್ಷಿ ಎಂದರು.
ನಾನು ಯಾವಾಗಲೂ ಸೈನಿಕರ ಬಗ್ಗೆ ಗೌರವ ಭಾವನೆ ಹೊಂದಿದ್ದೇನೆ. ದೇಶದ ಗಡಿ ಕಾದು ಬಂದಿರುವ ಮಾಜಿ ಸೈನಿಕರನ್ನು ಸದಾ ಗೌರವಿಸುತ್ತೇನೆ. ಸೈನಿಕರ ಬಗ್ಗೆ ವಿಶೇಷವಾದ ಗೌರವ, ಪ್ರೀತಿ, ಕಾಳಜಿ ಹೊಂದಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಸೈನಿಕರು ನಿವೃತ್ತಿರಾದರೂ ಸುಮ್ಮನೆ ಕೂರದೇ ಸಮಾಜದ ಅಂಕುಕೊಂಡುಗಳನ್ನು ತಿದ್ದುವ ಕೆಲಸಗಳನ್ನು ಮಾಡುತ್ತಿದ್ದಾರೆ. ಮಾಜಿ ಸೈನಿಕರ ಬೇಡಿಕೆಗಳು ಸಾಕಷ್ಟಿವೆ, ಅವರ ಶಿಸ್ತು ಬದ್ಧ ಜೀವನವನ್ನು ನೋಡಿದರೆ, ಅವರಿಗೆ ಸರ್ಕಾರದ ಸಹಾಯವೇ ಅವಶ್ಯಕತೆ ಇಲ್ಲ ಎನಿಸುತ್ತದೆ. ಮಾಜಿ ಸೈನಿಕರೇ ನಮಗೆ ಆದರ್ಶ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮನಂಥ ವೀರರನ್ನು ಈ ನಾಡಿಗೆ ಕೊಟ್ಟಿರುವ ಬೆಳಗಾವಿ ಜಿಲ್ಲೆ, ದೇಶ ಕಾಯಲು ಸಾವಿರಾರು ಸೈನಿಕರನ್ನು ನೀಡಿದೆ. ಕರ್ನಾಟಕದಿಂದ ಅತಿಹೆಚ್ಚು ಯೋಧರು ಇರುವ ಜಿಲ್ಲೆ ಎಂದರೆ ಅದು ನಮ್ಮ ಬೆಳಗಾವಿ. ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ರುದ್ರಯ್ಯ ಹಿರೇಮರ್ ಸ್ವಾಮಿಗಳು, ಶಾಸಕ ಆಸಿಫ್ ಸೇಠ್, ಬಸಪ್ಪ ತಳವಾರ, ಯುವರಾಜ್ ಕದಂ, ಮನೋಹರ್ ಬೆಳಗಾಂಟ್ಕರ್, ಶಂಕರಗೌಡ ಪಾಟೀಲ್, ಸುನೀಲ್ ದಾಗರ್, ಕಲ್ಲಪ್ಪ ಪಾಟೀಲ್, ಆರ್.ವಾಯ್.ಹಿರೇಮಠ, ಮಾಜಿ ಸೈನಿಕರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು