ಬೆಳಗಾವಿ: ಬೆಳಗಾವಿ ನಗರದ ಜೋಶಿ ಮಾಳದಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವರ ಸ್ಥಿತಿ ಚಿಂತಾಜನಕವಾಗಿತ್ತು. ಆ ಪ್ರಕರಣದಲ್ಲಿ ಮೂವರನ್ನು ಶಾಹಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೋಶಿ ಮಾಳ ನಿವಾಸಿ ಸಂತೋಷ ಗಣಪತಿ ಕುರಡೇಕರ್(47), ಅವರ ತಾಯಿ ಮಂಗಲ ಕುರಡೇಕರ್(80), ಸಹೋದರಿ ಸುವರ್ಣಾ ಕುರಡೇಕರ್(52) ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿದ್ದರು. ಈ ವೇಳೆ ಸಂತೋಷ ಮತ್ತೋರ್ವ ಸಹೋದರಿ ಸುನಂದಾ ಕುರಡೇಕರ್ ಕೂಡ ವಿಷ ಸೇವಿಸಿದ್ದರು. ಸದ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ, ಇದು ಅತ್ಯಂತ ದುಃಖದ ಘಟನೆ. ಮೃತ ಸಂತೋಷ ಕುರಡೇಕರ್ ಚಿನ್ನದ ವ್ಯವಹಾರದ ಜೊತೆಗೆ ಚಿನ್ನದ ಬಿಸಿ ಕೂಡ ಮಾಡುತ್ತಿದ್ದರು. ಬಿಸಿ ವ್ಯವಹಾರದಲ್ಲಿ ಅವರಿಗೆ ನಷ್ಟವಾಗಿತ್ತು. ಅಲ್ಲದೇ ಯಾರಿಗೆ ದುಡ್ಡು ಕೊಡಬೇಕಿತ್ತೊ ಅವರು ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಮನೆಯವರಿಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತೋಷ ತಿಳಿಸಿದ್ದರು. ಅವರ ಮನೆಯವರಿಗೆ ಅವರ ಮೇಲೆ ಎಷ್ಟು ಪ್ರೀತಿ ಎಂದರೆ ನಿನ್ನ ಜೊತೆಗೆ ನಾವು ಸಾಯುತ್ತೇವೆ ಅಂತಾ ಹೇಳಿ ಎಲ್ಲರೂ ಕೂಡಿಕೊಂಡು ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಿವರಿಸಿದರು.
ಅದೃಷ್ಟವಶಾತ್ ಬದುಕುಳಿದಿರುವ ಸಂತೋಷ ಸಹೋದರಿ ಸುನಂದಾ ಅವರ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ಇನ್ನು ಡೆತ್ ನೋಟ್ ನಲ್ಲಿಯೂ ಕೂಡ ಕೆಲ ಸುಳಿವು ಸಿಕ್ಕಿದೆ. 500 ಗ್ರಾಂ ಚಿನ್ನವನ್ನು ಆರೋಪಿ ರಾಜೇಶ ಕುಡತರಕರ್ ಅವರಿಗೆ ಸಂತೋಷ ಕೊಟ್ಟಿದ್ದರು. ಅದನ್ನು ವಾಪಸ್ಸು ಕೊಟ್ಟಿರಲಿಲ್ಲ. ಅಲ್ಲದೇ ಸಂತೋಷ ಮೊಬೈಲಿನಲ್ಲಿಯೂ ಕೆಲ ಸಾಕ್ಷ್ಯಗಳು ಸಿಕ್ಕಿವೆ. ಭಾಸ್ಕರ್ ಸೋನಾರ ಮತ್ತು ನಾನಾ ಶಿಂಧೆ ಅವರನ್ನು ಹೆಸರನ್ನು ಹೇಳಿದ್ದಾರೆ. ಹಾಗಾಗಿ, ಈ ಮೂವರನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದೇವೆ ಎಂದರು.
ಆರೋಪಿ ರಾಜೇಶ ಕುಡತರಕರ್ ಅವರ ಮನೆ ಮೇಲೆ ನಿನ್ನೆ ನಮ್ಮ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 49 ಲಕ್ಷ ರೂ. ಮೌಲ್ಯದ 661 ಗ್ರಾಂ ಚಿನ್ನಾಭರಣ, 7.70 ಲಕ್ಷ ನಗದು ಸಿಕ್ಕಿದ್ದು, ಅದನ್ನು ಜಪ್ತಿ ಪಡಿಸಿಕೊಂಡಿದ್ದೇವೆ. ಪ್ರಕರಣದಲ್ಲಿ ಇನ್ನು ಕೆಲವರ ಪಾತ್ರ ಇರುವುದು ಕಂಡು ಬಂದಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ಯಾರ ಜೊತೆಗೆ ಬಿಸಿ ವ್ಯವಹಾರ ಮಾಡಿದ್ದರು. ಯಾರೆಲ್ಲಾ ಕಿರುಕುಳ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತೇವೆ. ಅದೇರೀತಿ ಆರೋಪಿ ರಾಜೇಶ ಕುಡತರಕರ್ ಪತ್ನಿ ಅವಮಾನ ಮಾಡಿರುವ ಬಗ್ಗೆಯೂ ವಿಚಾರಿಸುತ್ತೇವೆ ಎಂದರು.
ಮೃತ ಸಂತೋಷ ಕುರಡೇಕರ್ ಅವರ ಮೊಬೈಲಿನಲ್ಲಿ ಒಂದು ವಾಕ್ಯ ಬರೆದಿದ್ದರು. ಡೆತ್ ನೋಟ್ ನಲ್ಲಿ ಯಾರು ಸಾಲ ಮಾಡಿದ್ದಾರೊ ಅವರಿಗೆ ಇಷ್ಟು ಚಿತ್ರಹಿಂಸೆ ಯಾರೂ ಕೊಡಬಾರದು ಎಂದಿದ್ದರು. ಹಾಗಾಗಿ, ಹಣಕಾಸಿನ ವಿಚಾರದಲ್ಲಿ ಜೀವ ಬೆದರಿಕೆ, ಮಾನ ಹಾನಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ಸಾಲ ಕೊಟ್ಟವರು ಯಾರಾದರೂ ಕಿರುಕುಳ ಕೊಟ್ಟರೆ ಅಂತವರ ವಿರುದ್ಧ ದೂರು ಕೊಟ್ಟರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಸಾರ್ವಜನಿಕರು ಸಾಲ ತೆಗೆದುಕೊಳ್ಳುವಾಗ ಅಧಿಕೃತ ಸಂಸ್ಥೆಗಳಿಂದಲೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬಡ್ಡಿ, ಚಕ್ರಬಡ್ಡಿ ಹಾಕುತ್ತಾರೆ. ಆದ್ದರಿಂದ ಎಚ್ಚರ ವಹಿಸುವಂತೆ ಭೂಷಣ ಬೊರಸೆ ಕೋರಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನಂದಾ ಅವರು ರಾಜು ಕುಡತರಕರ್ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಮಾತಾಡಲು ಶುರು ಮಾಡಿದರೆ ವಾಂತಿ ಆಗುತ್ತಿದೆ. ಹಾಗಾಗಿ, ಅವರನ್ನು ಜಾಸ್ತಿ ಮಾತನಾಡಿಸಿಲ್ಲ. ಅವರು ಹುಷಾರಾದ ಬಳಿಕ ಹೆಚ್ಚಿನ ಮಾಹಿತಿ ಪಡೆಯುತ್ತೇವೆ ಎಂದು ಭೂಷಣ ಬೊರಸೆ ಹೇಳಿದರು.