ಚನ್ನಮ್ಮನ ಕಿತ್ತೂರು : ಮನೆಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಚನ್ನಮ್ಮನ ಕಿತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದು, ಚಿನ್ನಾಭರಣ ಸೇರಿ 20 ಲಕ್ಷ 30 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಮಹಾದೇವ ನಾರಾಯಣ ಧಾಮಣಿಕರ (26) ಎಂದು ಗುರುತಿಸಲಾಗಿದ್ದು, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧೆಡೆ ಮನೆಗಳ್ಳತನ ಆರೋಪಿ ಮಹಾದೇವ ವಿರುದ್ಧ ಚನ್ನಮ್ಮನ ಕಿತ್ತೂರು ಸೇರಿ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಬಂಧಿತನಿಂದ 200 ಗ್ರಾಮ್ ಬಂಗಾರದ ಆಭರಣಗಳು ಮತ್ತು 270 ಗ್ರಾಮ್ ಬೆಳ್ಳಿಯ ಆಭರಣಗಳನ್ನು ಸೇರಿ ಒಟ್ಟು 20 ಲಕ್ಷ 30 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಿತ್ತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 3 ಹಾಗೂ ಧಾರವಾಡ ತಾಲೂಕಿನಲ್ಲಿ 2 ಮನೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐಗಳಾದ ಪ್ರವೀಣ ಗಂಗೋಳ, ಪ್ರವೀಣ ಕೋಟಿ, ಎಎಸ್‌ಐಗಳಾದ ರಮೇಶ ಗೆಜೇರಿ, ಬಿ.ಪಿ. ಪರಗಣ್ಣವರ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.