ಬೆಳಗಾವಿ: ಸೈಬರ್ ವಂಚಕರ ಬೆದರಿಕೆಗೆ ಹೆದರಿ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಜರಾತ ರಾಜ್ಯದ ಸೂರತ್‌ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ ಆರೋಪಿ. ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2), 03(5) ಬಿಎನ್ಎಸ್ ಅಡಿ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೀಡಿ ಗ್ರಾಮದ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾಗಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ನಜರತ್ (78) ಅವರು ಮಾರ್ಚ್ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದರೆ, ಡಿಯಾಗೋ ಚಾಕುವಿನಿಂದ ತಮ್ಮ ಕುತ್ತಿಗೆಗೆ ಚುಚ್ಚಿಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ನಮಗೆ ಪದೇ ಪದೆ ಬೆದರಿಕೆ ಹಾಕಿದ್ದಾರೆ. ನನ್ನ ಸಿಮ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಿಲ್ ಯಾದವ್ ಎಂಬ ವ್ಯಕ್ತಿ ಕರೆ ಮಾಡಿ, ‘ನಿಮ್ಮ ನಂಬರಿನಿಂದ ನನಗೆ ಬೆತ್ತಲೆ ಚಿತ್ರಗಳು, ಅಶ್ಲೀಲ ಸಂದೇಶಗಳು ರವಾನೆಯಾಗಿವೆ. ಇದರ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾಗಿ ಎಂದು ಬೆದರಿಸುತ್ತಿದ್ದಾರೆ’ ಎಂದು ಡಿಯಾಗೋ ಡೆತ್‌ನೋಟ್ ಬರೆದಿಟ್ಟಿದ್ದರು.
ಇದರಿಂದ ಹೆದರಿದ ಡಿಯಾಗೋ 50 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಸೈಬರ್ ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಪೀಡಿಸಿದ್ದರು. ಹೆಚ್ಚಿನ ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.