ಬೆಳಗಾವಿ: ಭಾರತದ ಸಂವಿಧಾನ ಇಡೀ ವಿಶ್ವದಲ್ಲೆ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಇಡೀ ವಿಶ್ವದಲ್ಲೆ ಪ್ರಜಾಪ್ರಭುತ್ವ ಏನು ಅಂತಾ ತೋರಿಸಿಕೊಟ್ಟಿದೆ. ಅಂತ ಸಂವಿಧಾನ ಬರೆದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಬಹಳಷ್ಟು ಶ್ರದ್ಧೆ, ಅಭಿಮಾನದಿಂದ ಬೆಳಗಾವಿಯಲ್ಲಿ ಆಚರಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ಅಂಬೇಡ್ಕರ್ ಉದ್ಯಾನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿ, ಎಲ್ಲರಿಗೂ ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದರು.
ಅಂಬೇಡ್ಕರ್ ಅವರು ಬಂದು ಹೋಗಿರುವ ಕಂಗ್ರಾಳ ಗಲ್ಲಿಯಲ್ಲಿ ಮ್ಯೂಸಿಯಂ ನಿರ್ಮಾಣ ವಿಚಾರಕ್ಕೆ ಸ್ಥಳೀಯ ಶಾಸಕರ ಜೊತೆಗೆ ಚರ್ಚೆ ಮಾಡಿ, ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಇದೆ ಎಂದು ಹೇಳಲ್ಲ. ನಾನು ಒಬ್ಬ ಮಹಿಳೆಯಾಗಿ ಅತ್ಯಾಚಾರ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು. ಪಾಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತೇನೆ. ತತ್ವರಿತ ಗತಿಯಲ್ಲಿ ನ್ಯಾಯ ಸಿಗುವಂತಾಗಬೇಕು ಎಂದರು.
ಪಿಎಸ್ಐ ಅನ್ನಪೂರ್ಣ ಕಾರ್ಯಕ್ಕೆ ನಾನು ಶ್ಲಾಘನೆಗೆ ವ್ಯಕ್ತ ಪಡಿಸುತ್ತೇನೆ. ನಾನು ಸಚಿವೆಯಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅನ್ನಪೂರ್ಣಗೆ ಅತ್ಯುನ್ನತ ಪದಕ ಸಿಗಬೇಕು. ಆ ನಿಟ್ಟಿನಲ್ಲಿ ಸಿಎಂ, ಗೃಹ ಸಚಿವರನ್ನು ಭೇಟಿಯಾಗುತ್ತೇನೆ.
ಬೇರೆ ಅಧಿಕಾರಿಗಳಿಗೆ ಇದು ದಾರಿ ದೀಪವಾಗಬೇಕು.
ಇಂತಹ ಪಿಡುಗು ನಮ್ಮ ಸಮಾಜದಿಂದ ನಿರ್ಮೂಲನೆ ಆಗಬೇಕು. ನಮ್ಮ ಇಲಾಖೆಯಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಕೊಡುತ್ತೇನೆ. ಸರ್ಕಾರಿ ನೌಕರರಿಗೆ ಪ್ರಶಸ್ತಿ ಕೊಡಬೇಕು ಅಂತಾ ಬಂದರೇ ಮೊದಲ ಹೆಸರು ಪಿಎಸ್ಐ ಅನ್ನಪೂರ್ಣ ಅವರದ್ದೇ ಆಗಿರುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಬಿಜೆಪಿಯವರಿಗೆ ಕನ್ನಡಿ ತೋರಿಸುವ ಅವಶ್ಯಕತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗಿಲ್ಲ. ಅಂತ ಬಾಲಿಶತನದ ಹೇಳಿಕೆ ಕೊಡಲು ನಾನು ಹೋಗಲ್ಲ. ಇಂತಹ ಘಟನೆ ನಡೆದಾಗ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಬೇರೆ ರಾಜ್ಯಗಳನ್ನು ಹೋಲಿಸಲು ನಾನು ಹೋಗಲ್ಲ. ಬಿಜೆಪಿಯವರು ಮಣಿಪುರದ ಕಡೆ ಒಮ್ಮೆ ನೋಡಲಿ. ಪ್ರಧಾನಿ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿಕೊಟ್ಟಿಲ್ಲ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ಬಿಜೆಪಿಯಿಂದ ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ ಸಮಾವೇಶ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಶ್ರದ್ಧಾ, ಭಕ್ತಿಯಿಂದ ನಂಬಿದೆ. ನಿಪ್ಪಾಣಿಗೆ ಅಂಬೇಡ್ಕರ್ ಬಂದು ನೂರು ವರ್ಷ ಹಿನ್ನೆಲೆಯಲ್ಲಿ ಇದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಸರ್ಕಾರದಿಂದ ನಾವು ಕಾರ್ಯಕ್ರಮ ಮಾಡುತ್ತೇವೆ ಎಂದರು.
ಜಾತಿ ಗಣತಿ ಬಿಡುಗಡೆಗೆ ಜಾತಿ ಗಣತಿಗೆ ನಮ್ಮ ವಿರೋಧ ಇಲ್ಲ. ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಜಾತಿ ಗಣತಿಯನ್ನು ಇನ್ನೊಮ್ಮೆ ಒಟ್ಟಾಗಿ ಮಾಡಬೇಕು. ಎಲ್ಲಾ ಸಮಾಜದ ಜಾತಿಯಲ್ಲಿ ಜನರು ಹೆಚ್ಚಾಗಿ ಇರುತ್ತಾರೆ. ಅದರಂತೆ ನಮ್ಮ ವೀರಶೈವ, ಲಿಂಗಾಯತರಲ್ಲಿಯೂ ಜನ ಹೆಚ್ಚಾಗಿದ್ದಾರೆ. ಎರಡೂ ಬೇರೆ ತೋರಿಸಿದ್ದರಿಂದ ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ಶಿಂಧೊಳ್ಳಿಯಲ್ಲಿ ನರೇಗಾ ಯೋಜನೆಯಡಿ ಮಂಜೂರಾದ 4.60 ಲಕ್ಷ ಅನುದಾನ ಲಕ್ಷ್ಮೀ ಹೆಬ್ಬಾಳ್ಕರ್ ತಡೆ ಹಿಡಿದಿದ್ದಾರೆ ಎಂಬ ಸಂಸದ ಜಗದೀಶ ಶೆಟ್ಟರ್ ಆರೋಪಕ್ಕೆ ಶಿಂಧೊಳ್ಳಿಯಲ್ಲಿ ಜಾತ್ರೆ ಇರುವ ಹಿನ್ನೆಲೆಯಲ್ಲಿ 6 ಕೋಟಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು ಒಂದೇ ಪಂಚಾಯತಿಗೆ 4.60 ಲಕ್ಷ ಬಂದಿದೆ ಎಂಬುದು ನನಗೆ ಆಶ್ಚರ್ಯ ಆಗುತ್ತಿದೆ. ಅದೇ ರೀತಿ ಎಲ್ಲಾ ಪಂಚಾಯಿತಿಗಳಿಗೆ ಅಷ್ಟು ಅನುದಾನ ಕೊಡಿಸಿದರೆ ಶೆಟ್ಟರ್ ಅವರ ಮನೆಗೆ ನಾನೇ ಹೋಗಿ ಅವರ ಜೊತೆಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವ ಜಾಯಮಾನ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಹಿಂದುಳಿದ ನನ್ನ ಕ್ಷೇತ್ರದಲ್ಲಿ ಯಾರಾದ್ರೂ ಬಂದು ಅಭಿವೃದ್ಧಿ ಮಾಡುತ್ತೇವೆ ಎಂದರೆ ಎಲ್ಲರಿಗೂ ಸ್ವಾಗತ ಎಂದರು.