ಬೆಳಗಾವಿ: ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಮಹಾಲಕ್ಷ್ಮಿಜಾತ್ರಾ ಮಹೋತ್ಸವ ಮಾ.18 ರಿಂದ ಮಾ.26ರವರೆಗೆ ಸಂಭ್ರಮದಿಂದ ಜರುಗಲಿದೆ ಎಂದು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೊದ್ಧಾರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ದೇವಣ್ಣ ಬಂಗೇನ್ನವರ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾ.18 ಮಂಗಳವಾರ ಆರಂಭವಾಗಲಿರುವ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರದಿಂದ ಭಕ್ತರು ಬರುತ್ತಾರೆ. ಮಾ.18 ರಂದು ಬಡಿಗೇರ ಮನೆಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಪ್ರತಿಷ್ಠಾನೆ ಮಾಡಿ ಸಂಜೆ 5.ಗಂಟೆಗೆ ದೇವಿಯ ಉಡಿ ತುಂಬುವುದು ಹಾಗೂ ರಾತ್ರಿಯಿಂದ ಗ್ರಾಮದಲ್ಲಿ ಹೊನ್ನಾಟ ಪ್ರಾರಂಭವಾಗುತ್ತದೆ.
ಮಾ.19 ಬುಧವಾರದಂದು ಗ್ರಾಮದಲ್ಲಿ ಹೊನ್ನಾಟವಾಡಿ ಸಂಜೆ ಜಾತ್ರಾ ದೇವಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಮಾ.20ರಂದು ಗುರುವಾರ ಜಾತ್ರಾ ಮಹೋತ್ಸವ ಆರಂಭವಾಗಲಿದೆ ಎಂದರು. ಮಾ.21 ರಂದು ಶುಕ್ರವಾರ ದೇವಿಗೆ ಕಾಣಿಕೆ ಸಲ್ಲಿಸುವುದು ಹಾಗೂ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.ಮಾ.26 ರಂದು ಬುಧವಾರ ಸಂಜೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದರು.