ವಚನಕಾರರ ಸಾಮಾಜಿಕ ಕೊಡುಗೆಯನ್ನು ಆದರ್ಶಪ್ರಾಯವಾಗಿ ಅರಿತುಕೊಂಡು ಬದುಕಬೇಕು: ಗಂಗಾಧರ ದಿವಿಟರ
ಬೆಳಗಾವಿ, ಫೆ.10(ಕರ್ನಾಟಕ ವಾರ್ತೆ): 12ನೇ ಶತಮಾನದಲ್ಲಿನ ಕಾಯಕ ಶರಣರಾದ ಮಾದರ ಚನ್ನಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಾಗರ ಹರಳಯ್ಯ ಹಾಗೂ ಉರಿಲಿಂಗಪೆದ್ದಿಯರು ಮಹಾನ್ ವ್ಯಕ್ತಿಗಳು. ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸಿ, ಯಾವುದೇ ಮೇಲು, ಕೀಳು ತಾರತಮ್ಯ ಇಲ್ಲದೆ ಸಮಾಜದ ಉದ್ದಾರಕ್ಕಾಗಿ ಪರಿತಪಿಸಿದವರು. ಎಲ್ಲರೂ ಅವರ ವಚನ ಸಾಹಿತ್ಯಗಳನ್ನು ಅರಿತು ಬದುಕಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ (ಫೆ.10) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶರಣ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಶರಣರ ವಚನ ಸಾಹಿತ್ಯದ ಕೊಡುಗೆಗಳನ್ನು ಆದರ್ಶವಾಗಿ ಇಟ್ಟುಕೊಂಡು ಅವರು ತೋರಿಸಿದ ದಾರಿಯಲ್ಲಿ ಬದುಕಬೇಕು. ಯುವ ಪೀಳಿಗೆಗೆ ಶರಣರ ಆಚಾರ ವಿಚಾರ, ಆದರ್ಶ, ತತ್ವ ಸಂಸ್ಕಾರವನ್ನು ಬೆಳೆಸಿಕೊಂಡು ಜೀವನದಲ್ಲಿ ಬದುಕಲು ಕಲಿಸಬೇಕು.
ನಮ್ಮ ವ್ಯಕ್ತಿತ್ವದಿಂದ ಸಮಾಜಕ್ಕೆ ಮಾದರಿಯಾಗಬೇಕು.
ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಂತ್ರಜ್ಞಾನದ ಗುಲಾಮರಾಗಿದ್ದಾರೆ. ಒಳ್ಳೆಯ ಮಾಹಿತಿಗಳನ್ನು ಪಡೆದುಕೊಳ್ಳದೆ ವಂಚಿತರಾಗುತಿದ್ದಾರೆ. ಪ್ರತಿಯೊಬ್ಬರೂ ಶರಣರ ನಿಜ ಜೀವನದ ಜೀವನ ಚರಿತ್ರೆ ಓದುವ ಮೂಲಕ ಒಳ್ಳೆಯ ಸಂಸ್ಕಾರ ಬೆಳಸಿಕೊಳ್ಳಬೇಕು. ಅದೇ ರೀತಿಯಲ್ಲಿ ನಮ್ಮ ವ್ಯಕ್ತಿತ್ವವನ್ನು ಸುಧಾರಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ ಅವರು ಹೇಳಿದರು.
ಈ ವೇಳೆ ಉಪನ್ಯಾಸ ನೀಡಿದ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ರೇಣುಕಾ ಕಠಾರಿ ಅವರು ಸಮಾಜದಲ್ಲಿರುವ ಜಾತಿ ಮತ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶರಣ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿಯವರ ಶ್ರಮಿಸಿದ್ದಾರೆ. ಸಮಾಜದಲ್ಲಿ ಸಮಾನತೆ, ಏಕತೆಯ ಬದಲಾವಣೆ ತರಲು ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ದೇಶ ಕಟ್ಟುವಲ್ಲಿ ಯುವ ಜನತೆಯು ಶಿವಶರಣರ ಆಚಾರ ವಿಚಾರ ಹಾಗೂ ಆದರ್ಶ ತತ್ವಗಳನ್ನು ಅಭ್ಯಾಸಿಸಬೇಕು ಎಂದು ಡಾ. ರೇಣುಕಾ ಕಠಾರಿ ಹೇಳಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾದಾರ, ಡೋಹರ, ಸಮಗಾರ ಹಾಗೂ ಚಲುವಾದಿ ಸಮಾಜದ ವಿದ್ಯರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಸಮಾಜದ ಮುಖಂಡರಾದ ಮಲ್ಲೇಶ ಚೌಗುಲಾ, ರವಿ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಪನಿರ್ದೇಶಕರು ವಿದ್ಯಾವತಿ ಭಜಂತ್ರಿ, ವಿವಿಧ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.