ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಭರ್ಜರಿ ಕ್ಯಾಂಪೇನ್ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.
ಶನಿವಾರ ಸಾಯಂಕಾಲ ಸವದತ್ತಿ ಬಾರ್ ಅಸೋಸಿಯೇಶನ್ ನ ಜೊತೆ ಸಭೆ ಮಾಡಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ನನಗೆ ಬೆಳಗಾವಿ ಜೊತೆ ವಿಶೇಷವಾದ ನಂಟು ಇದೆ. ಹುಬ್ಬಳ್ಳಿ ನನ್ನ ಜನ್ಮ ಭೂಮಿಯಾದರೆ ಬೆಳಗಾವಿ ನನ್ನ ಕರ್ಮ ಭೂಮಿ ಆಗಿದೆ. ಸಂವಿಧಾನದ ಪ್ರಕಾರ ಯಾರು ಎಲ್ಲಿ ಬೇಕಾದರೂ ಚುನಾವಣೆ ಸ್ಪರ್ಧೆ ಮಾಡಬಹುದು. ನಾನು ಚುನಾವಣೆ ಗೆದ್ದ ಮೇಲೆ ಐದು ವರ್ಷ ಜನರಿಗೆ ಸರ್ವಿಸ್ ನೀಡಬೇಕು.
ನನಗೆ ರಾಜಕೀಯದಲ್ಲಿ ಸಾಕಷ್ಟು ಅನುಭವ ಇದೆ. ಲೋಕಸಭೆಗೆ ಗೆದ್ದು ಹೊದ ಮೇಲೆ ಬೆಳಗಾವಿ ಭಾಗದಲ್ಲಿ ಅನೇಕ ಯೋಜನೆಗಳು ಹಾಕಿಕೊಂಡಿದ್ದೇನೆ. ಬೆಳಗಾವಿಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎನ್. ಮುತ್ತಿನ, ಬಿಜೆಪಿ ಮುಖಂಡ ವೀರುಪಾಕ್ಷ ಮಾಮನಿ, ಜೆಡಿಎಸ್ ಮುಖಂಡ ಸೌರಭ ಚೋಪ್ರಾ, ಬಿ.ವೈ. ಮಲ್ಲಿಗೂಡರ, ಸಿ.ಜಿ. ತುನಮರಿ, ಜಗದೀಶ್ ಸಿಂತರಿ, ಎಂ.ಎಫ್ ಬಡಗೇರ ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.
*ಬೃಹತ್ ರೋಡ್ ಶೋ ಮೂಲಕ ಮತಯಾಚನೆ*
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಸವದತ್ತಿ ಮತಕ್ಷೇತ್ರದ ಶಿರಸಂಗಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ರೋಡ್ ಶೋ ನಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಈ ರೋಡ್ ಶೋನಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಜಗದೀಶ್ ಗೆ ಸಾಥ್ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರ ಬೆಂಬಲ ಕಂಡು ಈ ಬಾರಿ ಮತ್ತೊಮ್ಮೆ ಕಮಲ ಅರಳುವುದು ಶತಸಿದ್ಧ ಎಂದು ಜಗದೀಶ್ ಶೆಟ್ಟರ್ ಅವರು ವಿಶ್ವಾಸ ವ್ಯಕ್ತ ಪಡಿಸಿದರು. ಈ ವೇಳೆ ಜನ ಮೋದಿ ಮೋದಿ ಎಂದು ಜಯ ಘೋಷಣೆ ಕೂಗುವ ಮೂಲಕ ಬೆಂಬಲ ವ್ಯಕ್ತ ಪಡಿಸಿದ್ದಾರೆ.