ಬೆಳಗಾವಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ವೈಯಕ್ತಿಕ ರಾಜಕಾರಣ ನಾವು ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರು ಮಾಡಿರುವ ಆರೋಪದ ಬಗ್ಗೆ ಹೇಳಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಂಗಳವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವೈಯಕ್ತಿಕ ರಾಜಕಾರಣ ಮಾಡುವಷ್ಟು ನಾನು ಸಣ್ಣವಳಲ್ಲ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರು ಮಾಡಿರುವ ಆರೋಪವನ್ನು ನಾನು ಹೇಳಿದ್ದೇನೆ ಎಂದರು.
ಬಿಜೆಪಿಯವರು ಬಹಿರಂಗವಾಗಿ ಪ್ರಚಾರ ಮಾಡದೆ ತಮ್ಮದೆಯಾದ ತಂತ್ರ ಅನುಸರಿಸುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಅವರ ತಂತ್ರ ಅನುಸರಿಸುತ್ತಾರೆ. ನಾವು ನಮ್ಮ ತಂತ್ರ ಅನುಸರಿಸುತ್ತೇವೆ ಎಂದರು.
ಜಗದೀಶ್ ಶೆಟ್ಟರ್ ಅವರು ಅಡ್ರೆಸ್ ಸುರೇಶ್ ಅಂಗಡಿಯವರದ್ದೆ, ಚುನಾವಣೆಯ ಫಲಿತಾಂಶ ಬಂದ ಬಳಿಕ ಅವರು ಕೇಂದ್ರ ಸಚಿವರಾದರೆ ಕಾಂಗ್ರೆಸ್ ನವರೇ ಅಡ್ರೆಸ್ ಹುಡುಕಿಕೊಂಡು ಬರುತ್ತಾರೆ ಎಂದು ಹೇಳಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಹ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದು ಪ್ರತ್ಯುತ್ತರ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಮಾಡಲು ಬರುತ್ತಾರೆ.ಲೋಕಸಭಾ ಚುನಾವಣೆ ಕಾವು ಕಾಂಗ್ರೆಸ್ ಪರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತಮ ವಾತಾವರಣ ಜನರಿಂದ ಸಿಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ಎಲ್ಲಿ ಯಾರ ಪರ ಚುನಾವಣೆ ಮಾಡಿದ್ದಾರೆ ಎಂದು ಮತದಾರರಿಗೆ ಗೊತ್ತಿದೆ. ನಮ್ಮ ಬಗ್ಗೆ ಅಪಪ್ರಚಾರ, ಗುಪ್ತ ಸಭೆ ಮಾಡಿದ್ದರು. ಲೋಕಸಭಾ ಚುನಾವಣೆ ನಾವು ಸೌಮ್ಯದಿಂದ ಚುನಾವಣೆ ಮಾಡುತ್ತಿದ್ದೇವೆ ವಿರೋಧಿಗಳಿಗೆ ಮತದಾರರೇ ಉತ್ತರ ಕೊಡುತ್ತಾರೆ ಎಂದರು.