ಬೆಳಗಾವಿ: ಖಾನಾಪುರ ದಟ್ಟ ಅರಣ್ಯದಲ್ಲಿ ವಾಸಿಸುವ ಜನರ ಸಂಕಷ್ಟ ಹೇಳತೀರದು. ಅದರಲ್ಲೂ ಮಳೆಗಾಲದಲ್ಲಿ ಅವರು ಅನುಭವಿಸುವ ನರಕಯಾತನೆ ಆ ದೇವರಿಗೆ ಪ್ರೀತಿ. ಅನಾರೋಗ್ಯದಿಂದ ಬಳಲುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಪರದಾಡುತ್ತಾರೆ. ಹೋದ ವರ್ಷ ಕಟ್ಟಿಗೆ ಸ್ಟ್ರೇಚರ್ ಮೂಲಕ ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಲೂ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಕುರ್ಚಿಗೆ ಕಟ್ಟಿಗೆ ಕಟ್ಟಿ ಅದರ ಮೇಲೆ ವ್ಯಕ್ತಿಯನ್ನು ಕುಳ್ಳಿರಿಸಿ ಹೊತ್ತೊಯ್ಯಲಾಗಿದೆ.
ಹೌದು, ಖಾನಾಪುರ ತಾಲ್ಲೂಕಿನ ಕೊಂಗಳಾ ಗ್ರಾಮದ ವೆಂಕಟ ಗಾಂವಕರ್ ಎನ್ನುವ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಸುಮಾರು 8 ಕಿ.ಮೀ. ಮುಖ್ಯರಸ್ತೆವರೆಗೆ ಕುರ್ಚಿ ಮೇಲೆ ಹೊತ್ತುಕೊಂಡು ಗ್ರಾಮಸ್ಥರು ಬಂದಿದ್ದಾರೆ. ಅಲ್ಲಿಂದ ವಾಹನದಲ್ಲಿ ಖಾನಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಂಗಳಾ ಪಾಂಡ್ರಿ ನದಿ ಮತ್ತು ಬಂಡೂರಿ ನಾಲೆ ಹಿಂದೆ ಬರುವ ಕಾಡಂಚಿನ ಗ್ರಾಮ. ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕ ಇಲ್ಲ. ಕಟ್ಟಿಗೆ ಸೇತುವೆ ಮೇಲೆಯೇ ಓಡಾಡುವ ಅನಿವಾರ್ಯತೆ ಇಲ್ಲಿನ ಜನರದ್ದು. ಖಾನಾಪುರದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಲ್ಲೆ ವೆಂಕಟ ಅವರನ್ನು ಗ್ರಾಮಸ್ಥರು ಹೊತ್ತೊಯ್ದು ಆಸ್ಪತ್ರೆಗೆ ಸಾಗಿಸಿರುವ ದೃಶ್ಯ ಆಡಳಿತದ ವೈಪಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಘಟನೆ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೊಂಗಳಾ ಗ್ರಾಮದ 52 ವರ್ಷದ ವ್ಯಕ್ತಿ ವೆಂಕಟ ಅವರನ್ನು ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಕುರ್ಚಿ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ಭೀಮಗಡ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ಈ ರೀತಿ ಸಮಸ್ಯೆಗಳು ಪದೇ ಪದೇ ಸಂಭವಿಸುತ್ತವೆ. ಹಿಂದಿನ ವರ್ಷವೂ ಈ ರೀತಿ ಘಟನೆಗಳು ನಡೆದಿದ್ದವು. ಹಾಗಾಗಿ, ಕಾಡಿನೊಳಗೆ ವ್ಯವಸ್ಥೆ ಮಾಡಲು ಆಗದಿದ್ದರೆ ಅವರಿಗೆ ಪುನವರ್ಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ ಎಂದರು.
ಈಗಾಗಲೇ ತಳೇವಾಡಿ ಗ್ರಾಮದ 30 ಕುಟುಂಬಗಳ 140 ಜನರನ್ನು ಕಾಡಿನಿಂದ ಹೊರಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದೇವೆ. ಅದೇರೀತಿ ಆಮಗಾಂವ ಮತ್ತು ಕೊಂಗಳಾ ಗ್ರಾಮಗಳಿಗೆ ನಾನು, ಡಿಎಫ್ಓ ಜನಪ್ರತಿನಿಧಿಗಳೊಂದಿಗೆ ತೆರಳಿ ಅಲ್ಲಿನ ನಿವಾಸಿಗಳ ಜೊತೆಗೆ ಮಾತುಕತೆ ನಡೆಸುತ್ತೇವೆ. ಅವರನ್ನು ಮನವಲಿಸಲು ಪ್ರಯತ್ನಿಸುತ್ತೇವೆ. ಸ್ವ ಇಚ್ಛೆಯಿಂದ ಸ್ಥಳಾಂತರ ಆಗಲು ಅವರು ಒಪ್ಪಿದರೆ ಪುನವರ್ಸತಿ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದರು.