ಬೆಳಗಾವಿ: ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್ (28), ರಂಜೀತಾ ಚೋಬರಿ(26) ಮೃತ ಪ್ರೇಮಿಗಳು. ಆಟೋದಲ್ಲೆ ಇಬ್ಬರು ನೇಣಿಗೆ ಶರಣಾಗಿದ್ದಾರೆ.
ಇಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದಕ್ಕೆ ಯುವತಿ ಪೋಷಕರ ವಿರೋಧವಿತ್ತು. ಹಾಗಾಗಿ, ಹದಿನೈದು ದಿನದ ಹಿಂದೆಯಷ್ಟೇ ಬೇರೊಬ್ಬ ಹುಡುಗನ ಜೊತೆಗೆ ರಂಜೀತಾ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು. ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಬೇಕಿದೆ.
ಅವರಿಬ್ಬರು ಪ್ರೀತಿಸುತ್ತಿರುವ ವಿಚಾರ ನಮಗೆ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನ ರಾಘವೇಂದ್ರ ಮನೆಯಲ್ಲಿ ಊಟ ಮಾಡಿರಲಿಲ್ಲ. ಈಗ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಮಗೆ ಸಂಶಯ ಇದೆ. ಇದು ಆತ್ಮಹತ್ಯೆ ಅಲ್ಲ. ಕೊಲೆ ಆಗಿರಬಹುದು. ಹಾಗಾಗಿ, ಸೂಕ್ತ ತನಿಖೆ ನಡೆಸುವಂತೆ ಮೃತ ಯುವಕನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.