ಜಮ್ಮು: ಈ ಇಬ್ಬರು ಮಕ್ಕಳು ಒಟ್ಟಿಗೆ ಜನಿಸಿದ್ದರು, ಕೂಡಿ ಬೆಳೆದಿದ್ದರು, ಈಗ ಜೊತೆಯಾಗಿಯೇ ಈ ಜಗತ್ತನ್ನು ಶಾಶ್ವತವಾಗಿ ತೊರೆದಿದ್ದಾರೆ. ಜೊತೆಗೆ ಇವರ ತಂದೆ ಕೂಡ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಇತ್ತ ಈ ಮಕ್ಕಳ ತಾಯಿ ಬದುಕಿನ ಭರವಸೆಯನ್ನೇ ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ್ದಾರೆ. ಇದು ಪೂಂಚ್ ಗಡಿಯಲ್ಲಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯ ಸಂತ್ರಸ್ತ ಕುಟುಂಬವೊಂದರ ದುರಂತ ಕಥೆ. ಹೌದು, ಬುಧವಾರ ಪೂಂಚ್ ಜಿಲ್ಲೆಯಲ್ಲಿ ಬುಧವಾರ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಜೋಯಾ ಮತ್ತು ಜೈನಾ (ಇಬ್ಬರಿಗೂ 12 ವರ್ಷ) ಎಂಬ ಅವಳಿ ಮಕ್ಕಳು ಸಾವಿಗೀಡಾಗಿದ್ದಾರೆ. ಜೊತೆಗೆ ಅವರ ತಂದೆ ರಮೀಜ್ ಖಾನ್ (50) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಮಕ್ಕಳ ತಾಯಿ ಅರುಶಾ ಖಾನ್ ಮಕ್ಕಳನ್ನು ಕಳೆದುಕೊಂಡು ದುಃಖದ ಕಡಲಲ್ಲಿದ್ದಾರೆ.
ಉತ್ತಮ ಬದುಕಿಗಾಗಿ ಬಂದವರ ಬದುಕೇ ನರಕ: ಅರುಶಾ ಖಾನ್ ಮತ್ತು ಅವರ ಪತಿ ರಮೀಜ್ ಖಾನ್ (50) ಅವರು ತಮ್ಮ ಅವಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ತಮ್ಮ ಕಲಾನಿ ಚಕ್ಥ್ರು ಗ್ರಾಮದಿಂದ ಪೂಂಚ್ ನಗರಕ್ಕೆ ಶಿಫ್ಟ್ ಆಗಿದ್ದರು. ಆದರೆ, ಪಾಕಿಸ್ತಾನದ ದ್ವೇಷ ಮಕ್ಕಳ ಜೀವ ಮತ್ತ ಜೀವನವನ್ನೇ ಅಂತ್ಯಗೊಳಿಸಿದೆ. ಇವರ ಕುಟುಂಬದ ಹಣೆಬರಹವನ್ನೇ ಬದಲಿಸಿದೆ. ಪೂಂಚ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದಾರೆ. ಅರುಶಾ ಖಾನ್ ವೃತ್ತಿಪರ ತರಬೇತುದಾರರಾಗಿದ್ದರೆ, ರಮೀಜ್ ಖಾನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಪಾಕ್ ದಾಳಿಯಿಂದ ಪತಿ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದರೆ, ಇದೀಗ ಮಕ್ಕಳು ಸಾವನ್ನಪ್ಪಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಬುಧವಾರ ಬೆಳಗ್ಗೆ 7 ರಿಂದ 7.30ರ ಮಧ್ಯೆ ಪೂಂಚ್ನ ಕ್ರಿಸ್ತ್ ಶಾಲೆಯ ಬಳಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಇದರಿಂದ ಅಲ್ಲೇ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಗುಂಡು ತಾಗಿದೆ. ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದಾರೆ. ರಮೀಜ್ ತೀವ್ರವಾಗಿ ಗಾಯಗೊಂಡಿದ್ದು, ರಜೌರಿ ವೈದ್ಯಕೀಯ ಕಾಲೇಜಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ಅರುಶಾ ಖಾನ್ ಅವರಿಗೂ ಕೂಡ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ರಾಜೌರಿಯ ಆಸ್ಪತ್ರೆಯಲ್ಲಿರುವ ಇವರ ಸಂಬಂಧಿ ಆದಿಲ್ ಪಠಾಣ್ ಅವರು ತಿಳಿಸಿದ್ದಾರೆ.