Tuesday, April 29, 2025
Google search engine
Homeರಾಜ್ಯಕುರಿ ಕಾಯುವವನ ಮಗ ಯುಪಿಎಸ್ಸಿ ಸಾಧನೆ
spot_img

ಕುರಿ ಕಾಯುವವನ ಮಗ ಯುಪಿಎಸ್ಸಿ ಸಾಧನೆ

ಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ ತನ್ನತ್ತ‌ ತಿರುಗಿ ನೋಡಬೇಕೆಂಬ ಅಧಮ್ಯ ವಿಶ್ವಾಸ. ತಂದೆ-ತಾಯಿಗೆ ಮಗನ ಮೇಲೆ ಬೆಟ್ಟದಷ್ಟು ನಿರೀಕ್ಷೆ. ಅದು ಹುಸಿ ಆಗಲಿಲ್ಲ. ಸತತ ಓದು, ಪರಿಶ್ರಮ ಆತನ ಕೈ ಹಿಡಿದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೌದು, ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ‌ ಮೆರೆದಿದ್ದಾರೆ. ಯುಪಿಎಸ್ಸಿಯಲ್ಲಿ ಮಗ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿವಾಡದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಪ್ಪ ಯಲ್ಲಪ್ಪ, ಅವ್ವ ಕಾಳವ್ವ, ಪತ್ನಿ ಯಶೋಧಾ, ಸಹೋದರ ಆನಂದ ಸೇರಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲ. ಅಲ್ಲದೇ ಇಡೀ ಊರಿಗೆ ಊರೇ ಹನುಮಂತನ ಸಾಧನೆಗೆ ಹೆಮ್ಮೆ ಪಡುತ್ತಿದೆ.

ಹನುಮಂತ ಅವರ ಅಪ್ಪ ಮತ್ತು ಸಹೋದರ ಕುರಿ ಕಾಯುತ್ತಾ ಕೃಷಿ ಕಾಯಕ ಮಾಡುತ್ತಾರೆ. ಅವ್ವ ಅವರಿಗೆ ಸಹಾಯ ಮಾಡುತ್ತಾರೆ. ಯಾವುದೇ ಯುಪಿಎಸ್ಸಿ ಹಿನ್ನೆಲೆ ಇಲ್ಲ. ಮನೆಯಲ್ಲಿ ಬಡತನ ಹಾಸಿ ಹೊದ್ದಿದೆ. ಎಲ್ಲವನ್ನು ಮೆಟ್ಟಿ ನಿಂತು ಹನುಮಂತ ಯುಪಿಎಸ್ಸಿ ಪಾಸ್ ಆಗುವ ಮೂಲಕ ತಂದೆ-ತಾಯಿ ಹೆಮ್ಮೆ ಪಡುವ ಸಾಧನೆಗೈದಿದ್ದಾರೆ.

 ಯುಪಿಎಸ್ಸಿ ಟಾಪರ್ ಹನುಮಂತ ನಂದಿ ಅವರನ್ನು ಸಂಪರ್ಕಿಸಿದಾಗ ಹರ್ಷ ವ್ಯಕ್ತಪಡಿಸಿದರು. 8ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ. ಬಹಳ ಖುಷಿಯಾಗುತ್ತಿದೆ. ಮೂರು ಬಾರಿ ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆದಿದ್ದೆ. ಕೆಪಿಎಸ್ಸಿ ಮುಖ್ಯ ಪರೀಕ್ಷೆಗೂ ಓದುತ್ತಿದ್ದೆ. ನನ್ನ ಈ ಸಾಧನೆ ತಂದೆ-ತಾಯಿಗೆ ಅರ್ಪಿಸುತ್ತೇನೆ. ಸ್ನೇಹಿತರು ಸಾಕಷ್ಟು ಸಹಾಯ ಮಾಡಿದ್ದು, ಅವರನ್ನು ಎಂದೂ ಮರೆಯಲ್ಲ. ಅದೇ ರೀತಿ ಚಿಕ್ಕಂದಿನಲ್ಲಿ  ಚಿಕ್ಕಂದಿನಲ್ಲಿ ಸತ್ತಿಗೇರಿ ಹಾಸ್ಟೇಲ್ ವಾರ್ಡನ್ ಎಸ್.ಕೆ.ಪಾಟೀಲ ಅವರೇ ನನಗೆ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡಿದ್ದರು. ನನಗೆ ಸಹಾಯ ಮಾಡಿದ ಎಲ್ಲರಿಗೂ‌ ನಾನು ಚಿರಋಣಿ ಎಂದರು.

ಸಮಾಜದಲ್ಲಿ ಬಡವರು, ನೊಂದವರಿಗೆ ಒಳ್ಳೆಯ ಸೇವೆ ಸಲ್ಲಿಸುವ ಅಭಿಲಾಷೆ ಇದೆ. ಭಾರತೀಯ ರೈಲ್ವೇ ಸೇವೆ ಅಥವಾ ಭಾರತೀಯ ಕಂದಾಯ ಸೇವೆಯಲ್ಲಿ ಉನ್ನತ ಹುದ್ದೆ ಸಿಗುವ ನಿರೀಕ್ಷೆ ಇದೆ. ಯಾವುದೇ ಹುದ್ದೆ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹನುಮಂತ ಹೇಳಿದರು.

ಹನುಮಂತ ಅವರು, 1 ರಿಂದ 7ನೇ ತರಗತಿಯವರೆಗೆ ಸ್ವಗ್ರಾಮ ಕೊಡ್ಲಿವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು, 8-10ನೇ ತರಗತಿ ಸತ್ತಿಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ಪಿಯುಸಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರೆ, ಬೆಳಗಾವಿ ಗೋಗಟೆ‌ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಪಡೆದಿದ್ದಾರೆ.

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನದಡಿ ದೆಹಲಿಯಲ್ಲಿ 1 ವರ್ಷ ತರಬೇತಿ ಪಡೆದಿದ್ದರು. ದೆಹಲಿಯ ಶಂಕರ ಐಎಎಸ್ ಇನ್ಸಿಟಿಟ್ಯೂಟ್, ಇನ್ ಸೈಟ್ಸ್ ಐಎಎಸ್, ಅಕ್ಕಾ ಐಎಎಸ್ ಸೆಂಟರ್ ಗಳಲ್ಲಿ ಓದಿದ್ದರು. ಸದ್ಯ ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡು ಯುಪಿಎಸ್ಸಿ ಪರೀಕ್ಷೆಗೆ ಓದುತ್ತಿದ್ದರು. ಸತತ ಓದು, ಸ್ಪಷ್ಟವಾದ ಗುರಿ ಇಂದಿನ ನನ್ನ ಸಾಧನೆಗೆ ಕಾರಣ. ಬಡತನ, ಎಷ್ಟೇ ಸಮಸ್ಯೆ ಇದ್ದರೂ ಸಾಧನೆಗೆ ಅಡ್ಡಿಯಾಗದು ಎನ್ನುತ್ತಾರೆ ಹನುಮಂತ.

RELATED ARTICLES
- Advertisment -spot_img

Most Popular

error: Content is protected !!