ಹೈದರಾಬಾದ್ : ಇಂದು ಬಿಡುಗಡೆಯಾದ ಪುಷ್ಪ 2 ಚಿತ್ರದ ವೀಕ್ಷಣೆ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನೆರವು ನೀಡುವುದಾಗಿ ನಟ ಅಲ್ಲು ಅರ್ಜುನ್ ತಂಡ ಘೋಷಣೆ ಮಾಡಿದೆ. ಹೈದರಾಬಾದ್ನ ಸಂಧ್ಯಾ ಥಿಯೇಟರ್ ನಲ್ಲಿ ನೆನ್ನೆ ರಾತ್ರಿ ಪುಷ್ಪಾ ಚಿತ್ರ ವೀಕ್ಷಣೆಗಾಗಿ ತೆರಳಿದ್ದ 39 ವರ್ಷದ ರೇವತಿ ಎಂಬ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
ಇದೇ ಘಟನೆಯಲ್ಲಿ ರೇವತಿ ಅವರ 9 ವರ್ಷದ ಮಗ ಕೂಡ ಕಾಲ್ತುಳಿತಕ್ಕೆ ಸಿಲುಕಿ ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿರುವ 9 ವರ್ಷದ ಶ್ರೀತೇಜ್ ನನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಂಧ್ಯಾ ಥಿಯೇಟರ್ಗೆ ನಟ ಅಲ್ಲು ಅರ್ಜುನ್ ಮತ್ತು ಪುಷ್ಪ 2 ಚಿತ್ರತಂಡ ಭೇಟಿ ನೀಡುತ್ತಿದ್ದ ಎಂಬ ಸುದ್ದಿ ಹಿನ್ನೆಲೆಯಲ್ಲಿ ಥಿಯೇಟರ್ ಗೆ ಅಪಾರ ಪ್ರಮಾಣದ ಅಭಿಮಾನಿಗಳು ಧಾವಿಸಿದ್ದು, ಈ ವೇಳೆ ನಡೆದ ಕಾಲ್ತುಳಿತದಲ್ಲಿ ರೇವತಿ ಮತ್ತು ಶ್ರೀತೇಜ್ ಸಿಲುಕಿದ್ದರು.
ಈ ಪೈಕಿ ರೇವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರೆ, ಶ್ರೀತೇಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೀಗ ಈ ದುರಂತದ ಕುರಿತು ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದು, ‘ಈ ದುರಂತ ದುರಾದೃಷ್ಟಕರ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಟುಂಬಕ್ಕೆ ಅಗತ್ಯ ನೆರವು ನೀಡುತ್ತೇವೆ ಎಂದು ಹೇಳಿದೆ.
ಅಂತೆಯೇ ಬಾಲಕನ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಲಾಗಿದ್ದು, ‘ಗಾಯಗೊಂಡ ಬಾಲಕ ಶ್ರೀತೇಜ್ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 78 ಗಂಟೆ ಕಳೆಯೋವರೆಗೂ ಬಾಲಕನ ಆರೋಗ್ಯದ ಬಗ್ಗೆ ಏನೂ ಹೇಳಲಾಗದು. ಸದ್ಯ ಶ್ರೀತೇಜ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಯೂಟ್ಯೂಬ್ ಚಾನಲ್ಗಳು ಬಾಲಕ ಮೃತಪಟ್ಟಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಈ ಬಗ್ಗೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ಇಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ತಂಡ ಮನವಿ ಮಾಡಿದೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್, ”ಕಳೆದ ರಾತ್ರಿಯ ಸ್ಕ್ರೀನಿಂಗ್ ಸಮಯದಲ್ಲಿ ಸಂಭವಿಸಿರುವ ದುರಂತ ನಮಗೆ ತೀವ್ರ ದುಃಖ ನೀಡಿದೆ. ನಮ್ಮ ಪ್ರಾರ್ಥನೆ ಆ ಕುಟುಂಬ ಮತ್ತು ಚಿಕಿತ್ಸೆಗೊಳಗಾಗಿರುವ ಚಿಕ್ಕ ಮಗುವಿನೊಂದಿಗಿದೆ. ಈ ಕಠಿಣ ಸಂದರ್ಭ ಅವರೊಂದಿಗೆ ನಿಲ್ಲಲು, ಸಾಧ್ಯವಿರುವ ಎಲ್ಲಾ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.ಇನ್ನು ಸಂಧ್ಯಾ ಥಿಯೇಟರ್ನಲ್ಲಾದ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಈ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.