ಬೆಂಗಳೂರು : ಕನ್ನಡ ‘ಬಿಗ್ಬಾಸ್ ಸೀಸನ್ 11’ರಲ್ಲಿ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ದಿಢೀರ್ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಕಿಂಗ್ ಬೆಳವಣಿಗೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದು, ಸ್ಫರ್ಧಿ ಶೋಭಾ ಶೆಟ್ಟಿ ದೊಡ್ಮನೆಯಿಂದ ಹೊರ ಬಂದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚೈತ್ರಾ ಕುಂದಾಪುರ ದಿಢೀರ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದೇಕೆ? ಚೈತ್ರಾ ಕುಂದಾಪುರ ಮೇಲೆ ಹಲವು ಕೇಸ್ಗಳಿದ್ದು, ಆ ಪೈಕಿ MLA ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣ ಕೂಡ ಒಂದು. ಈ ಪ್ರಕರಣ ಸದ್ಯ ಮೂರನೇ ಎಸಿಎಂಎಂ ಕೋರ್ಟ್ ಅಂಗಳದಲ್ಲಿದೆ. ಈ ಪ್ರಕರಣದಲ್ಲಿ ವಾರೆಂಟ್ ರಿಕಾಲ್ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ನಿಂದ ಹೊರ ಬಂದು ಕೋರ್ಟ್ ಗೆ ಹಾಜರಾಗಿದ್ದಾರೆ.
ಚೈತ್ರಾ ಬಿಗ್ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಹೋಗಿದ್ದು, ವಾರಂಟ್ ರೀಕಾಲ್ ಮಾಡಿಕೊಂಡು ಮತ್ತೆ ಬಿಗ್ಬಾಸ್ ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ಆಟ ಮುಂದುವರಿಸಲಿದ್ದಾರೆ. ಸದ್ಯ ಕೋರ್ಟ್ ಮುಂದಿನ ವರ್ಷ ಜನವರಿ 13, 2025ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೆ ಬಿಗ್ಬಾಸ್ ಮನೆಯಲ್ಲೇ ಚೈತ್ರಾ ಇದ್ದರೆ ಮತ್ತೊಮ್ಮೆ ಅವರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ಇನ್ನು ಈ ಮೊದಲು ಬಿಗ್ಬಾಸ್ನಿಂದ ಯಾರಾದರೂ ಸ್ಫರ್ಧಿ ಹೊರ ಬಂದರೆ ಅವರನ್ನು ಮತ್ತೆ ದೊಡ್ಮನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಆಟದ ಶೈಲಿ ಬದಲಾಗಿದೆ. ಕಳೆದ ವರ್ಷ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್ನಲ್ಲಿ ಒಂದು ವಾರ ಜೈಲಿನಲ್ಲಿ ಇದ್ದು ಬಂದಿದ್ದರು. ಅವರನ್ನು ಮತ್ತೆ ಬಿಗ್ಬಾಸ್ ಒಳಕ್ಕೆ ಕರೆದುಕೊಳ್ಳಲಾಗಿದೆ.