ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್. ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿದ ಎಡಿಜಿಪಿ ಅವರು ಗಾಯಾಳುಗಳಿಗೆ ಧೈರ್ಯ ತುಂಬಿ, ಕಲ್ಲು ತೂರಾಟ ಘಟನೆ ಕುರಿತು ಮಾಹಿತಿ ಪಡೆದರು.
ಘಟನಾ ಸ್ಥಳದಲ್ಲಿನ 40-50 ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಘಟನೆ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರ ಪ್ರತಿಭಟನೆಯಲ್ಲಿ ಒಂದು ದೊಡ್ಡ ಮಾಬು ಕ್ರಿಯೇಟ್ ಆಗಿರುವುದರಿಂದ ಈ ರೀತಿ ಅಹಿತಕರ ಘಟನೆ ಆಗಿದೆ ಎಂದು ಹಿತೇಂದ್ರ ಆರ್. ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಡಿಜಿಪಿ ಹಿತೇಂದ್ರ ಆರ್., ಘಟನೆಯಲ್ಲಿ ನಮ್ಮ 11 ಜನ ಸಿಬ್ಬಂದಿಗೆ ಗಾಯಗಳಾಗಿವೆ. ಯಾವುದೇ ರೀತಿ ಅಹಿತಕರ ಘಟನೆ ನಡೆಯಬಾರದು ಅಂತ ಅದುಕೊಂಡಿದ್ದೇವು. ಆದರೂ ನಡೆದಿದೆ. ಹಾಗಾಗಿ ನಾನೇ ಖುದ್ದಾಗಿ ನಿನ್ನೆ ರಾತ್ರಿ ಬೆಳಗಾವಿಗೆ ಬಂದಿದ್ದೇನೆ. ನಮ್ಮ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ನಾವು ಯಾರಿಗೂ ಲಾಠಿಯಿಂದ ಹೊಡೆಯಿರಿ ಅಂತ ನಿರ್ದೇಶನ ಕೊಟ್ಟಿಲ್ಲ ರೈತರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೇವೆ. ಕಿಡಿಗೇಡಿಗಳು ಮಾಡಿರಬಹುದು ಅಂತ ನೋಡುತ್ತಿದ್ದೇವೆ ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ.
ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದೇನೆ. ಈಗಾಗಲೇ 4-5 ಸರ್ಕಾರಿ ವಾಹನಗಳು ಹಾಗೂ ಇನ್ನಿತರ ವಾಹನಗಳು ಸೇರಿ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.
ಅದೇ ರೀತಿ ಪ್ರಕರಣದಲ್ಲಿ ಇದುವರೆಗೂ ಯಾರನ್ನು ವಶಕ್ಕೆ ಪಡೆದಿಲ್ಲ ಕೆಲವು ವಿಡಿಯೋಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಹಿತೇಂದ್ರ ಆರ್. ಅವರು ಸ್ಪಷ್ಟಪಡಿಸಿದರು.
ಈ ವೇಳೆ ಐಜಿಪಿ ಚೇತನ್ ಸಿಂಗ್ ರಾಥೋಡ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.




